HEALTH TIPS

ಕಾಸರಗೋಡಿನಿಂದ - ಮಂಗಳೂರು ಮಾರ್ಗವಾಗಿ ಹಾಸನ - ರಾಯಚೂರು - ಮಂತ್ರಾಲಯ ಮೂಲಕ ಹೈದರಾಬಾದ್ ಗೆ ರೈಲು ಸಂಚಾರ ಒದಗಿಸಲು ಮಂಜೇಶ್ವರದ ರಾಯರ ಭಕ್ತರಿಂದ ಕೇಂದ್ರ ರೈಲ್ವೇ ಸಚಿವರಿಗೆ ಹಾಗೂ ಮಂಗಳೂರು ಸಂಸದರಿಗೆ ಮನವಿ

ಮಂಜೇಶ್ವರ: ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಮಠಕ್ಕೆ ತೆರಳಲು ಕಾಸರಗೋಡಿನಿಂದ ಮಂಗಳೂರು ದಾರಿಯಾಗಿ ಹಾಸನ, ರಾಯಚೂರು ಮೂಲಕ ಮಂತ್ರಾಲಯಕ್ಕೆ ರೈಲು ಸಂಚಾರ ಒದಗಿಸಿಕೊಡಬೇಕೆಂದು ಆಗ್ರಹಿಸಿ ರಾಯರ ಭಕ್ತರು ಮಂಜೇಶ್ವರ ವತಿಯಿಂದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೇಯ ಕರ್ನಾಟಕ ರಾಜ್ಯ ಸಚಿವ ವಿ. ಸೋಮಣ್ಣ ಮತ್ತು ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರಿಗೆ ಮನವಿ ನೀಡಿ ಲಕ್ಷಾಂತರ ಭಕ್ತರ ಅನುಕೂಲಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. 


ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರಿಗೆ ದೇಶ, ವಿದೇಶಗಳಲ್ಲಿ ಲಕ್ಷಾಂತರ ಮಂದಿ ಪರಮ ಭಕ್ತರಿದ್ದು, ನಿತ್ಯ ರಾಯರನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ವರ್ಷಕ್ಕೊಮ್ಮೆ ಅಥವಾ ಇತರ ದಿನಗಳಲ್ಲಿ ರಾಯರ ವೃಂದಾವನಸ್ಥರಾದ ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದಿವ್ಯ ಸನ್ನಿಧಿಗೆ ಭೇಟಿ ನೀಡಿ, ಶ್ರೀ ದೇವರ ದರ್ಶನ, ಪೂಜೆ ಪುನಸ್ಕಾರ ಸಲ್ಲಿಸಿ ಹಿಂತಿರುಗುತ್ತಿದ್ದಾರೆ. ಕಾಸರಗೋಡಿನಿಂದ ಮಂತ್ರಾಲಯಕ್ಕೆ ತೆರಳಲು ಮಂಗಳೂರಿನಿಂದ ಖಾಸಗಿ ಹಾಗೂ ಕರ್ನಾಟಕ ರಾಜ್ಯ ಸಾರಿಗೆಯ ಬಸ್ ಅಥವಾ ಬೆಂಗಳೂರು/ಹಾಸನಕ್ಕೆ ತೆರಳಿ ಅಲ್ಲಿಂದ ರೈಲನ್ನೇರಿ ಮಂತ್ರಾಲಯಕ್ಕೆ ತೆರಳಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಇದು ಪ್ರತಿಯೊಬ್ಬರಿಗೂ ದುಬಾರಿ ಬೆಲೆಯ ಟಿಕೆಟ್ ಹಾಗೂ ಸಮಯ ವ್ಯರ್ಥವನ್ನು ಕೂಡಾ ಮಾಡಿಕೊಡುತ್ತಿದೆ. ಅಲ್ಲದೆ ಗಂಟೆ ಗಟ್ಟಲೆ ಸಮಯ ಬಸ್ ನಲ್ಲೇ ಕಳೆಯಬೇಕಾಗುತ್ತದೆ. ಅಲ್ಲದೆ ಬಸ್ ನಲ್ಲಿ ಪ್ರಯಾಣಿಸುವ ಮಹಿಳೆ, ಮಕ್ಕಳಿಗೆ ಶೌಚಾಲಯದ ಸಮಸ್ಯೆ ಬಹುದೊಡ್ಡದಾಗಿ ಅನುಭವಕ್ಕೆ ಬರುತ್ತಿದೆ. 

ಕಾಸರಗೋಡು ಜಿಲ್ಲೆಯಲ್ಲಿ ಹಾಗೂ ಮಂಗಳೂರು, ಉಡುಪಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಕ್ಷಾಂತರ ಮಂದಿ ರಾಯರ ಭಕ್ತರಿದ್ದು, ಇವರೆಲ್ಲರ ಅನುಕೂಲಕ್ಕೆ ತಕ್ಕಂತೆ ಕಾಸರಗೋಡಿನಿಂದ ಮಂಗಳೂರು - ಹಾಸನ - ರಾಯಚೂರು - ಮಂತ್ರಾಲಯಕ್ಕೆ ನಿತ್ಯ ಸಂಜೆ ವೇಳೆ ರೈಲು ಸಂಚಾರ ಒದಗಿಸಿದಲ್ಲಿ ಲಕ್ಷಾಂತರ ಮಂದಿ ರಾಯರ ಭಕ್ತರಿಗೆ ಕ್ಷೇತ್ರ ಸಂದರ್ಶನಕ್ಕೆ ಹಾಗೂ ಪ್ರಯಾಣದ ವೇಳೆ ಮೂಲಭೂತ ಸೌಕರ್ಯಕ್ಕೂ ಅನುಕೂಲವಾಗುತ್ತದೆ. ಸದ್ಯ ಹಾಸನದಿಂದಲೂ ಹೈದರಾಬಾದ್ ನೇರ ರೈಲು ಸಂಪರ್ಕವಿಲ್ಲ. ಇದರಿಂದ ಆ ಭಾಗಕ್ಕೂ ಅನುಕೂಲವಾಗಲಿದೆ. ಕಾಸರಗೋಡಿನಿಂದ ಮಂಗಳೂರು ಮೂಲಕ ಮಂತ್ರಾಲಯ, ಹೈದರಾಬಾದ್ ಗೆ ರೈಲು ಆರಂಭಿಸುವ ಬಗ್ಗೆ ರೈಲ್ವೆ ಸಚಿವರು, ಮಂಗಳೂರು ಸಂಸದರು ಆಸಕ್ತಿ ತೋರಿ, ಈ ದಾರಿಯಲ್ಲಿ ರೈಲು ಸಂಚಾರ ಆರಂಭಗೊಂಡಲ್ಲಿ ಲಕ್ಷಾಂತರ ಮಂದಿ ರಾಯರ ಭಕ್ತರಿಗೆ ಅನುಕೂಲ ಮಾಡಿದಂತಾಗುತ್ತದೆ ಅಲ್ಲದೇ ರಾಯರ ಸಂಪೂರ್ಣ ಅನುಗ್ರಹ ಕೂಡಾ ದೊರೆಯಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. 

ಕೇಂದ್ರ ರೈಲ್ವೇ ಸಚಿವರಿಗೆ ಮಿಂಚಚೆ ಮೂಲಕ ಮನವಿ ನೀಡಲಾಗಿದ್ದು, ಮಂಗಳೂರು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಮಂಜೇಶ್ವರದ ರಾಯರ ಭಕ್ತರ ನಿಯೋಗ ಮುಖತಃ ಭೇಟಿಯಾಗಿ ಮನವಿ ನೀಡಲಾಯಿತು. ರಾಯರ ಭಕ್ತರು ಮಂಜೇಶ್ವರ ಸಂಸ್ಥಾಪಕ, ಪತ್ರಕರ್ತ ರತನ್ ಕುಮಾರ್ ಹೊಸಂಗಡಿ, ರಾಜೇಶ್ ಕಡಂಬಾರು, ಸಾಮಾಜಿಕ ಮುಂದಾಳುಗಳಾದ ಅವಿನಾಶ್ ಹೆಗ್ಡೆ ಮಂಜೇಶ್ವರ, ಪುರೋಹಿತ ಯಾದವ ಶರ್ಮಾ ಮಂಗಳೂರು, ದಿನ್ ರಾಜ್ ಪ್ರತಾಪನಗರ, ದೀಪಕ್ ರಾಜ್ ಉಪ್ಪಳ, ಅನಿಲ್ ಕುಮಾರ್ ಕೊಡ್ಲಮೊಗರು ಭೇಟಿ ನೀಡಿ ಮನವಿ ನೀಡಿದ ನಿಯೋಗದಲ್ಲಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries