ಬದಿಯಡ್ಕ: ಅಂಬೇಡ್ಕರ್ ವಿಚಾರ ವೇದಿಕೆ ಬದಿಯಡ್ಕ ನೇತೃತ್ವದಲ್ಲಿ ಕಥೆಗಾರ ದಿ.ಜನಾರ್ಧನ ಎರ್ಪಕಟ್ಟೆಯವರ ಸ್ಮರಣಾರ್ಥ 'ಎರ್ಪಕಟ್ಟೆ ನೆನಪು' ಕಾರ್ಯಕ್ರಮ ನೀರ್ಚಾಲಿನ ದಿ. ಕೃಷ್ಣ ದರ್ಬೆತ್ತಡ್ಕ ವೇದಿಕೆಯಲ್ಲಿ ಭಾನುವಾರ ಅಪರಾಹ್ನ ನಡೆಯಿತು.
ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿ.ಎರ್ಪಕಟ್ಟೆಯವರ ಕಥೆಗಳು ಆಳವಾದ ವಿಚಾರಗಳೊಂದಿಗೆ ಸಮುದಾಯ ಮುಖಿಯಾಗಿ ಅದರ ಏಳು-ಬೀಳುಗಳ ಕಾಲಘಟ್ಟವೊಂದರ ಅವತರಣಿಕೆಯಾಗಿ ಐತಿಹಾಸಿಕ ಮಹತ್ವವನ್ನು ಬಿಂಬಿಸಿದೆ. ಸಣ್ಣ ಘಟನಾವಳಿಗಳನ್ನು ಅದು ಒಳಗೊಳ್ಳುವ ಎಲ್ಲ ವಿವರಗಳ ಮೂಲಕ ತಾಳ್ಮೆಯಿಂದ ತಲಸ್ಪರ್ಶಿಯಾಗಿ ಕಥೆಯಾಗಿಸಿ ಕಟೆದು ನಿಲ್ಲಿಸುವ ಅಪೂರ್ವ ಸಿದ್ದಿ ಅವರ ಕೃತಿಯಲ್ಲಿ ಕಂಡುಬಂದಿದೆ. ಸೂಕ್ಷ್ಮ ವೀಕ್ಷಣಾ ಪ್ರವೃತ್ತಿ, ತಾಳ್ಮೆಯ ಗ್ರಹಿಕೆ ಮತ್ತು ಕಲೆಯ ಕುಸುರಿಕೆಲಸ ಇವನ್ನು ಮೈಗೂಡಿಸಿಕೊಂಡು ಬರೆದ ದಿ.ಜನಾರ್ದನ ಎರ್ಪಕಟ್ಟೆ ಸಣ್ಣಕಥೆಯ ಅತ್ಯುತ್ತಮ ಲಕ್ಷಣಗಳನ್ನು ತನ್ನದಾಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕವಿ, ಪತ್ರಕರ್ತ ರಾಧಾಕೃಷ್ಣ.ಕೆ.ಉಳಿಯತ್ತಡ್ಕ ಅವರು ಸಂಸ್ಮರಣಾ ಭಾಷಣಗೈದು ಸರಳವಾದ ಆಪ್ತ ಶೈಲಿಯಲ್ಲಿ ಬರೆಯುವ ಕಥೆಗಾರ ಜನಾರ್ದನ ಎರ್ಪಕಟ್ಟೆಯವರು ಬಂಡಾಯದಲಿತ ಚಳವಳಿಯ ಸಂದರ್ಭಗಳಿಂದಲೇ ಬರೆಯುತ್ತಿದ್ದರೂ ಅತ್ಯಂತ ಸಂಯಮದಿಂದ ಸಹಬಾಳ್ವೆಯ ಅಗತ್ಯ ಮತ್ತು ಸೂಕ್ಷ್ಮಗಳನ್ನು ಅರಿತುಕೊಂಡು ಬರೆದವರು. ಕಿವಿಯಪ್ಪಳಿಸುವ ಆಕ್ರೋಶ, ಆವೇಗ, ಉದ್ವೇಗಗಳಿಲ್ಲದ ತಣ್ಣಗಿನ ಪ್ರತಿಭಟನೆ ಇವರ ಕಥೆಗಳ ವೈಶಿಷ್ಟ್ಯ. ನ್ಯಾಯವನ್ನು ಆಗ್ರಹಿಸುವ ಅಬ್ಬರವಿಲ್ಲದ, ಆಡಂಬರವಿಲ್ಲದ ಆದರೆ ದೃಢವಾದ ಸ್ವರ ಇವರ ಕಥೆಗಳಲ್ಲಿ ಧ್ವನಿಸುತ್ತಿರುತ್ತದೆ. ಸಮಾನತೆ, ನ್ಯಾಯಕ್ಕಾಗಿ ಸಂಘರ್ಷವನ್ನು ಬಯಸುವ ಇವರ ಕಥೆಗಳಲ್ಲಿ ಸಂಘರ್ಷವೇ ನಿರಂತರವಾಗುವುದನ್ನು ತಪ್ಪಿಸುವ ಎಚ್ಚರವಿದೆ. ದ್ವೇಷಾಸೂಯೆಗಳನ್ನು ಮೀರಿದ ನಿಲುವುಗಳಿಂದ ಸಮನ್ವಯವನ್ನು ಸಾಧಿಸುವ ಪ್ರಾಮಾಣಿಕ ಪ್ರಯತ್ನವಿದೆ. ಪ್ರತಿಭಟನೆ ಸ್ಫೋಟಗೊಂಡು ಛಿದ್ರ ಛಿದ್ರವಾಗಿ ಎಲ್ಲೂ ಕೊನೆಗಾಣುವುದಿಲ್ಲ, ಬದಲಿಗೆ ಪ್ರತಿಭಟನೆ, ಬದಲಾವಣೆಯನ್ನು, ನ್ಯಾಯವನ್ನೂ, ಸಮಾನತೆಯನ್ನು ಪ್ರೀತಿಯ ಒತ್ತಾಯದಿಂದಲೇ ಆಗ್ರಹಿಸಿ ಪಡೆಯ ಬಯಸುತ್ತದೆ. ದಲಿತರ ಪರವಾದ ತೀರ್ಮಾನವನ್ನು ಮಾತ್ರಬಯಸದೆ ಸರ್ವರಿಗೂ ಸಮಾನತೆಯನ್ನು ಬಯಸುವ ಸಾಮಾಜಿಕ ಅರಿವಿನೊಂದಿಗೆ ಕಥೆಗಳನ್ನು ಸುಂದರವಾಗಿ ನಿರ್ಲಿಪ್ತತೆಯಿಂದ ಎರ್ಪಕಟ್ಟೆ ಬರೆಯುತ್ತಾರೆ. ಈ ವಿಶಿಷ್ಟ ಹಾಗೂ ಮಾನವೀಯ ಗುಣಗಳಿಂದಾಗಿ ಎರ್ಪಕಟ್ಟೆಯವರ ಕಥೆಗಳು ನಮಗೆ ಮುಖ್ಯವಾಗುತ್ತವೆ ಎಂದು ನೆನಪಿಸಿದರು.
ನರೇಂದ್ರನ್ ಕಾಞಂಗಾಡು ಅವರು ದಿ. ಜನಾರ್ಧನ ಎರ್ಪಕಟ್ಟೆಯವರ ಭಾವಚಿತ್ರಕ್ಕೆ ಹಾರಾರ್ಪಣೆಗೈದರು. ಕವಯಿತ್ರಿ ವನಜಾಕ್ಷಿ ಚೆಂಬ್ರಕಾನ ಅವರು ಎರ್ಪಕಟ್ಟೆಯವರ ಕಥೆಯನ್ನು ವಾಚಿಸಿದರು. ಕಥೆಗಾರ ಶಶಿ ಭಾಟಿಯ, ಕೆಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಬಾಲಕೃಷ್ಣ ಬೇರಿಕೆ, ಕವಯಿತ್ರಿ ಪದ್ಮಾವತಿ ಏದಾರು ಕಥಾವಾಚನ ಮಾಡಿದರು. ಪತ್ರಕರ್ತ ಪುರುಷೋತ್ತಮ ಭಟ್ ಪುದುಕೋಳಿ, ಸುನಂದ ಟೀಚರ್ ಕುಂಬಳೆ ಮಾತನಾಡಿದರು. ಶಾರದ ಎರ್ಪಕಟ್ಟೆ, ಗೋಪಾಲಕೃಷ್ಣ ದರ್ಬೆತ್ತಡ್ಕ, ಸುಮಿತ್ರ ಎರ್ಪಕಟ್ಟೆ, ಚೇತನ ಮೊದಲಾದವರು ಉಪಸ್ಥಿತರಿದ್ದರು. ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುಂದರ ಬಾರಡ್ಕ ಸ್ವಾಗತಿಸಿ, ನಿರೂಪಿಸಿದರು. ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ವಂದಿಸಿದರು.




