ವಿಶ್ವಸಂಸ್ಥೆ: ಗಾಜಾದಲ್ಲಿನ ದೀರ್ಘಕಾಲದ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕ ಕೈಗೊಂಡಿರುವ ಕಾರ್ಯಕ್ಕೆ ಭಾರತ ಮೆಚ್ಚುಗೆ ವ್ಯಕ್ತಪಡಿಸಿದೆ.
ಗಾಜಾ ಸಂಘರ್ಷ ಪರಿಹರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೈಗೊಂಡಿದ್ದ ನಿರ್ಣಯ ಅನುಷ್ಠಾನದ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಭಾರತ ಹೇಳಿದೆ.
ಈ ಕುರಿತು ಭದ್ರತಾ ಮಂಡಳಿಯ ಚರ್ಚೆಯ ವೇಳೆ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಪರ್ವತನೇನಿ ಹರೀಶ್ ಹೇಳಿಕೆ ನೀಡಿದ್ದಾರೆ.
ಗಾಜಾದ ಪುನರ್ ನಿರ್ಮಾಣ, ಆರ್ಥಿಕ ಚೇತರಿಕೆ, ಸಾರ್ವಜನಿಕ ಸೇವೆಗಳು ಮತ್ತು ಮಾನವೀಯ ನೆರವು ಒದಗಿಸಲು ಅಂತರರಾಷ್ಟ್ರೀಯ ಸಮುದಾಯದ ನಿರಂತರ ಬೆಂಬಲ ಮತ್ತು ಬದ್ಧತೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
'ಇದೇ ವೇಳೆ ಭಯೋತ್ಪಾದನೆಗೆ ನಾಗರಿಕ ಸಮಾಜದಲ್ಲಿ ಸ್ಥಾನವಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಬೇಕಿದೆ' ಎಂದಿದ್ದಾರೆ.

