ಕುಂಬಳೆ: ವಿದ್ಯಾರ್ಥಿಗಳಲ್ಲಿ ಮೌಲ್ಯಯುತ ಸಾಹಿತ್ಯ ಕೃತಿಗಳ ಓದು ಮತ್ತು ಅರಿವು ಹುಟ್ಟಿಸಿ, ಜ್ಞಾನ ಹೆಚ್ಚಿಸುವ ಉದ್ದೇಶ ಲಕ್ಷ್ಯದೊಂದಿಗೆ ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಏರ್ಪಡಿಸಿದ ಜಿಲ್ಲಾ ಮಟ್ಟದ ಕನ್ನಡ ವಾಚನ ಸ್ಪರ್ಧೆ ಕುಂಬಳೆ ಜಿ. ಎಚ್. ಎಸ್. ಎಸ್. ನಲ್ಲಿ ಭಾನುವಾರ ನಡೆಯಿತು. ಯು. ಪಿ ವಿಭಾಗ ಪ್ರೌಢ ಶಾಲಾ ವಿಭಾಗ ಮತ್ತು ಹಿರಿಯರ ವಿಭಾಗಕ್ಕೆ ಪ್ರತ್ಯೇಕವಾಗಿ ನಡೆಸಲಾದ ವಾಚನ ಸ್ಪರ್ಧೆಯ ಪರೀಕ್ಷೆಯಲ್ಲಿ 130 ವಿದ್ಯಾರ್ಥಿಗಳು ಪಾಲ್ಗೊಂಡು ಗಮನ ಸೆಳೆದರು.
ಸ್ಪರ್ಧಾ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಾ. ಪಿ. ಪ್ರಭಾಕರನ್ ಉದ್ಘಾಟಿಸಿದರು. ಲೈಬ್ರರಿ ಕೌನ್ಸಿಲ್ ಮಂಜೇಶ್ವರ ತಾಲೂಕು ಅಧ್ಯಕ್ಷೆ ಶ್ರೀಕುಮಾರಿ ಟೀಚರ್, ಕೌನ್ಸಿಲ್ ಪದಾಧಿಕಾರಿಗಳಾದ ದಾಸಪ್ಪ ಶೆಟ್ಟಿ, ಅಹ್ಮದ್ ಹುಸೈನ್ ಮಾಸ್ತರ್ ಪೈವಳಿಕೆ, ಮನೋಜ್ ಕುಮಾರ್, ಕಮಲಾಕ್ಷ, ಸಲಾಹುದ್ದೀನ್ ಮಾಸ್ತರ್ ಉಪಸ್ಥಿತರಿದ್ದರು.
ಹೈಸ್ಕೂಲು ವಿಭಾಗದ ವಿದ್ಯಾರ್ಥಿಗಳಿಗೆ ಲೇಖಕರಾದ ಡಾ. ಇಂದಿರಾ ಹೆಗ್ಗಡೆ ಅವರ 'ಹಿಮಾಲಯ ಶಿಖರಗಳ ಸಾನ್ನಿಧ್ಯದಲ್ಲಿ ನಡೆದಾಟ', ರಂಜನಿ ರಾಘವನ್ ಅವರ 'ಕತೆ ಡಬ್ಬಿ',
ಪದ್ಮರಾಜ ದಂಡಾವತಿ ಅವರ 'ರಾಮಾಯಣ ಮಹಾಭಾರತ', ಅಪ್ಪಗೆರೆ ಸೋಮಶೇಖರ್ ಅವರ 'ಮೌನದಾಚೆಯ ಮಾರ್ಗದಾತ', ಡಾ. ಮೀನಾಕ್ಷಿ ರಾಮಚಂದ್ರ ಅವರ 'ಮಾತು ಎಂಬ ವಿಸ್ಮಯ' ಕೃತಿಗಳನ್ನು ಆಯ್ಕೆಮಾಡಿ ವಾಚನಕ್ಕೆ ಒದಗಿಸಲಾಗಿತ್ತು.
ಯು.ಪಿ. ವಿಭಾಗಕ್ಕೆ ಲೇಖಕ ಸಂತೋಷ್ ಅನಂತಪುರ ಅವರ 'ಸವಾರಿ ಗಿರಿ ಗಿರಿ, ಡಾ. ಎಚ್. ಆರ್. ಮಣಿಕರ್ಣಿಕಾ ಅವರ 'ಎಳೆಯರ ನಡೆ ಇಂದೇ ತಿದ್ದೋಣ', ಆರ್. ಎಂ. ಜಿ. ನಂದನಾ ಅವರ 'ಜೋಕರ್ ಮತ್ತು ಇತರ ಕತೆಗಳು', ಡಾ. ಶಿವರಾಮ ಕಾರಂತರ ವ್ಯಕ್ತಿಗಳ ಅದ್ಭುತ ಲೋಕ, ಎ. ಆರ್. ಮಣಿಕಾಂತ್ ಅವರ 'ಅಪ್ಪ ಅಂದ್ರೆ ಆಕಾಶ' ಕೃತಿಗಳನ್ನು ವಾಚನಕ್ಕೆ ಒದಗಿಸಲಾಗಿತ್ತು. ಹಿರಿಯರ ವಿಭಾಗಕ್ಕೆ ಎಚ್. ಆರ್. ನವೀನ್ ಕುಮಾರ್ ಅವರ 'ರೈತರಿಗಾಗಿ ನಿರಂಜನ', ರೇಖಾ ಗಾಂವಕರ ಅವರ ಸ್ತ್ರೀ, ಡಾ. ಶ್ರೀಧರ ಎನ್. ಅವರ,'ಸಾಂದರ್ಭಿಕ, ಡಾ. ಜ್ಯೋತಿ ಎ. ಅವರ 'ಅತ್ತೆ ನಿಮಗೊಂದು ಪ್ರಶ್ನೆ', ಡಾ. ರಹಮತ್ ತರೀಕೆರೆ ಅವರ 'ಅಂಡಮಾನ್ ಕನಸು' ಕೃತಿಗಳನ್ನು ಒದಗಿಸಲಾಗಿತ್ತು.
ಹೈಸ್ಕೂಲು ವಿಭಾಗವು ಶಾಲಾ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಪಡೆದವರ ಜಿಲ್ಲಾ ಮಟ್ಟದ ಸ್ಪರ್ಧೆಯಾದರೆ ಯು. ಪಿ ಮತ್ತು ಹಿರಿಯ ವಿಭಾಗವು ಜಿಲ್ಲೆಯ ಪ್ರಾದೇಶಿಕ ಲೈಬ್ರರಿಗಳಲ್ಲಿ ನಡೆದ ಸ್ಥರ್ಧಾ ವೀಜೇತರ ಜಿಲ್ಲಾ ಮಟ್ಟದ ಸ್ಪರ್ಧೆಯಾಗಿದೆ. ವಿಜೇತರನ್ನು ಗುರುತಿಸಿ ಲೈಬ್ರರಿ ಕೌನ್ಸಿಲ್ ಸಮಾರಂಭದಲ್ಲಿ ಬಹುಮಾನ ಘೋಷಣೆ, ವಿತರಣೆ ನಡೆಯಲಿದೆ. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಕಮಲಾಕ್ಷ ಸ್ವಾಗತಿಸಿ, ಕುಂಬಳೆ ಇಎಂಎಸ್ ಸ್ಮಾರಕ ಲೈಬ್ರರಿ ಕಾರ್ಯದರ್ಶಿ ಚಂದ್ರಶೇಖರ ವಂದಿಸಿದರು.

.jpg)
.jpg)
.jpg)
