ಕುಂಬಳೆ: ಸಿಪಿಎಂ ನೇತೃತ್ವದ ಎಡರಂಗದ ವತಿಯಿಂದ ಉತ್ತರ ವಲಯ ಅಭಿವೃದ್ಧಿ ಜಾಥಾ ಫೆ. 1ರಂದು ಮಧ್ಯಾಹ್ನ 3ಕ್ಕೆ ಕುಂಬಳೆಯಿಂದ ಆರಂಭಗೊಳ್ಳಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜಾಥಾ ಉದ್ಘಾಟಿಸುವರು ಎಂದು ಎಡರಂಗ ಜಿಲ್ಲಾ ಸಂಚಾಲಕ ಕೆ.ಪಿ. ಸತೀಶ್‍ಚಂದ್ರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಿಪಿಎಂ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ವಿ ಗೋವಿಂದನ್ ಜಾಥಾ ನೇತೃತ್ವ ವಹಿಸುವರು. ಸಂಸದ, ಸಿಪಿಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಸಂತೋಷ್ ಕುಮಾರ್ ಜಾಥಾ ಪ್ರಬಂಧಕರಾಗಿರುವರು. ಸರ್ಕಾರದ ಜನಪರ-ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜಾಥಾ ಹಮ್ಮಿಕೊಳ್ಳಲಾಗಿದೆ. ಎಡರಂಗದ ಕಳೆದ ಒಂಬತ್ತುವರೆ ವರ್ಷದ ಆಡಳಿತದಲ್ಲಿ ಕೇರಳ ಮಹತ್ವದ ಅಭಿವೃದ್ಧಿಗೆ ಸಾಕ್ಷಿಯಾಗಿದ್ದು, ಇದನ್ನು ಮರೆಮಾಚಿ, ಕಾಂಗ್ರೆಸ್ ಹಾಗೂ ಬಿಜೆಪಿ ಸುಳ್ಳು ಪ್ರಚಾರದಲ್ಲಿ ತೊಡಗಿದೆ. ಕಳೆದ ಬಾರಿಯ ಐಕ್ಯರಂಗ ಆಡಳಿತಾವಧಿಯಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತ, ಭ್ರಷ್ಟಾಚಾರ, ಮುಖಂಡರ ಆಂತರಿಕ ಕಲಹದಿಂದ ರಾಜ್ಯ ಶಿಥಿಲಾವಸ್ಥೆಗೆ ತಲುಪಿರುವ ಬಗ್ಗೆ ಜಾಥಾದಲ್ಲಿ ಜನತೆಗೆ ಮನವರಿಕೆ ಮಾಡಲಾಗುವುದು. ಜಾಥಾ ಎರಡನೇ ದಿನ ಬೆಳಿಗ್ಗೆ 10.30 ಕ್ಕೆ ಉದುಮ, 3 ಕ್ಕೆ ಪೆರಿಯಾಟಡ್ಕ, 4ಕ್ಕೆ ಕಾಞಂಗಾಡ್ ಕ್ಷೇತ್ರದ ಕೋಟಚ್ಚೇರಿ, 5ಕ್ಕೆ ತ್ರಿಕರಿಪುರ ಕ್ಷೇತ್ರದ ಕಾಲಿಕಡವ್‍ನಲ್ಲಿ ಸ್ವಾಗತದ ನಂತರ ಜಾಥಾ ಕಣ್ಣೂರು ಜಿಲ್ಲೆಯನ್ನು ಪ್ರವೇಶಿಸಲಿದೆ ಎಂದು ತಿಳಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ.ಬಾಬು, ಕೆ.ಆರ್.ಜಯಾನಂದ, ಸಾಜಿ ಸೆಬಾಸ್ಟಿಯನ್, ಕೆ.ವಿ.ಕೃಷ್ಣನ್, ಸಿ.ಬಾಲನ್, ಅಜೀಜ್ ಕಡಪ್ಪುರಂ, ಪಿ.ಟಿ.ನಂದಕುಮಾರ್, ಕರೀಂ ಚಂದೇರಾ, ರತೀಶ್ ಪುತಿಯಾಪುರಾಯಿಲ್, ಕೆ.ಎಂ.ಬಾಲಕೃಷ್ಣನ್ ಉಪಸ್ಥಿತರಿದ್ದರು.

