ವಿಚಾರಣಾ ನ್ಯಾಯಾಲಯಗಳಲ್ಲಿ ಎಷ್ಟು ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ,ಎಷ್ಟು ಪ್ರಕರಣಗಳು ಇತ್ಯರ್ಥಗೊಂಡಿವೆ ಅಥವಾ ಬಾಕಿಯಿವೆ ಎಂಬ ಮಾಹಿತಿಯನ್ನು ಒದಗಿಸುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಆರ್.ಮಹಾದೇವನ್ ಮತ್ತು ಜಾಯಮಾಲ್ಯ ಬಾಗ್ಚಿ ಅವರ ಪೀಠವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತು.
ನಾಲ್ಕು ವಾರಗಳಲ್ಲಿ ವಿವರಗಳನ್ನು ಸಲ್ಲಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ ಪೀಠವು, ಇಂತಹ ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯಗಳು ಸೇರಿದಂತೆ ಮೇಲ್ಮನವಿ ನ್ಯಾಯಾಲಯಗಳಲ್ಲಿ ಎಷ್ಟು ಮೇಲ್ಮನವಿಗಳು ಸಲ್ಲಿಕೆಯಾಗಿವೆ ಎಂಬ ಬಗ್ಗೆ ಮಾಹಿತಿಯನ್ನು ಒದಗಿಸುವಂತೆಯೂ ಕೇಳಿದೆ.
ಪ್ರತಿಯೊಬ್ಬ ಸಂತ್ರಸ್ತೆಯ ಸಂಕ್ಷಿಪ್ತ ವಿವರಗಳು, ವಿದ್ಯಾರ್ಹತೆ , ಉದ್ಯೋಗ ಮತ್ತು ವೈವಾಹಿಕ ಸ್ಥಿತಿಗತಿ, ವೈದ್ಯಕೀಯ ಚಿಕಿತ್ಸೆ ಮತ್ತು ಭರಿಸಲಾದ ಅಥವಾ ಭರಿಸಬೇಕಿರುವ ವೆಚ್ಚಗಳ ಕುರಿತು ಮಾಹಿತಿ ಹಾಗೂ ಇಂತಹ ಸಂತ್ರಸ್ತರಿಗಾಗಿ ಪುನರ್ವಸತಿ ಯೋಜನೆಯ ಕುರಿತು ವಿವರಗಳನ್ನು ಒದಗಿಸುವಂತೆಯೂ ಪೀಠವು ಸೂಚಿಸಿದೆ.
ಆಯಸಿಡ್ ಸೇವಿಸುವಂತೆ ಸಂತ್ರಸ್ತರನ್ನು ಬಲವಂತಗೊಳಿಸಿದ ಪ್ರಕರಣಗಳ ವಿವರಗಳನ್ನು ಸಲ್ಲಿಸುವಂತೆಯೂ ಪೀಠವು ತಿಳಿಸಿದೆ.
ಆಯಸಿಡ್ ದಾಳಿಗಳಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಖಚಿತಪಡಿಸಲು ಕಾನೂನಿನಲ್ಲಿ ಬದಲಾವಣೆಗಳನ್ನು ತರುವುದನ್ನು ಪರಿಗಣಿಸುವಂತೆ ನ್ಯಾ.ಸೂರ್ಯಕಾಂತ್ ಅವರು ಕೇಂದ್ರಕ್ಕೆ ಸೂಚಿಸಿದರು.
ಪೀಠವು ಆಯಸಿಡ್ ದಾಳಿ ಸಂತ್ರಸ್ತೆ ಶಾಹೀನ್ ಮಲಿಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.
ಬಲವಂತದಿಂದ ಆಯಸಿಡ್ ಸೇವನೆಯಿಂದ ಆಂತರಿಕ ಅಂಗಾಂಗಗಳಿಗೆ ಮಾರಣಾಂತಿಕ ಹಾನಿಗೊಳಗಾದ ಸಂತ್ರಸ್ತರಿಗೆ ಸಾಕಷ್ಟು ಪರಿಹಾರ ಮತ್ತು ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಇತರ ಸೌಲಭ್ಯಗಳು ಸಿಗುವುದನ್ನು ಖಚಿತಪಡಿಸಲು ಕಾನೂನಿನಡಿ ಅಂಗವಿಕಲ ವ್ಯಕ್ತಿಗಳ ವ್ಯಾಖ್ಯಾನವನ್ನು ವಿಸ್ತರಿಸುವಂತೆ ಅವರು ಕೋರಿದ್ದಾರೆ.

