ಶಿಲ್ಲಾಂಗ್ (PTI): ಮೇಘಾಲಯದ ದಕ್ಷಿಣ ಗಾರೊ ಜಿಲ್ಲೆಯಲ್ಲಿ, ಜನರು ತಮ್ಮ ಜಮೀನು ಖಾಲಿ ಮಾಡುವಂತೆ ಬೆದರಿಕೆ ಹಾಕಿರುವ ಪೋಸ್ಟರ್ ಅನ್ನು ತುರದಲ್ಲಿ ಹಾಕಲಾಗಿದೆ. ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಘಟನೆ ಹೆಸರಿನಲ್ಲಿ ಈ ಪೋಸ್ಟರ್ ಹಾಕಿದ್ದು, ರಾಜ್ಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
'ಜಿಲ್ಲೆಯ ಫುಬಾರಿ, ರಾಜಬಲ, ಟಿಕ್ರಿಕಿಲ್ಲಾ, ಸೆಸ್ಲಾ, ಗರೊಬಧಾ ಹಾಗೂ ತುರಿಸೊರಿಯಲ್ಲಿರುವ ಗಾರೊ ಸಮುದಾಯದ ಜನರು 2027ರ ಒಳಗೆ ತಮ್ಮ ಜಾಗವನ್ನು ಖಾಲಿ ಮಾಡಬೇಕು. ಇಲ್ಲದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ' ಎಂದು ಇಂಗ್ಲಿಷ್‌ನಲ್ಲಿ ಪೋಸ್ಟರ್‌ನಲ್ಲಿ ಬರೆಯಲಾಗಿದೆ.
ಪೋಸ್ಟರ್‌ನಲ್ಲಿ ಅಮಿನುರ್ ಇಸ್ಲಾಂ ಎಂಬ ವ್ಯಕ್ತಿಯ ಹೆಸರಿದ್ದು, ಇದನ್ನು ಐಎಸ್ ಬಿಡುಗಡೆ ಮಾಡಿದೆ ಎನ್ನಲಾಗಿದೆ.
'ಇಂತಹ ಬೆದರಿಕೆಗಳು ಸ್ವೀಕಾರಾರ್ಹವಲ್ಲ. ಇವು ಭಯ ಹುಟ್ಟಿಸುವ ಮತ್ತು ಕೋಮು ಸೌಹಾರ್ದವನ್ನು ಕದಡುವ ಗುರಿ ಹೊಂದಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ' ಎಂದು ಸಚಿವ ಮಾರ್ಕ್ಯೂಸ್ ಮರಾಕ್ ಹೇಳಿದರು.
'ಜನರ ದಾರಿ ತಪ್ಪಿಸುವ ಹಾಗೂ ಭಯ ಹುಟ್ಟಿಸುವ ಉದ್ದೇಶದಿಂದ ಐಎಸ್ ಹೆಸರನ್ನು ಬಳಸಲಾಗಿದೆಯೇ ಎಂಬುದನ್ನೂ ಪರಿಶೀಲಿಸುತ್ತಿದ್ದೇವೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

