ನವದೆಹಲಿ: ತಮಗೆ ಜಾಮೀನು ಸಿಗದಿದ್ದರೂ, ತಮ್ಮೊಂದಿಗೆ ಬಂಧನಕ್ಕೊಳಗಾಗಿದ್ದ ಉಳಿದವರಿಗೆ ಜಾಮೀನು ದೊರೆತಿರುವುದು ಸಮಾಧಾನ ತಂದಿದೆ ಎಂದು 2020ರ ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ ಸೋಮವಾರ ಹೇಳಿದ್ದಾರೆ.
ಗಲಭೆಗೆ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಅವರು ಹಾಗೂ ಶಾರ್ಜಿಲ್ ಇಮಾಮ್‌ಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಇದರ ಬೆನ್ನಲ್ಲೇ, ಖಾಲಿದ್ ಹೇಳಿಕೆ ನೀಡಿದ್ದಾರೆ.
ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಹಾಗೂ ಎನ್.ವಿ ಅಂಜಾರಿಯ ಅವರಿದ್ದ ಪೀಠ, ಇತರೆ ಐವರು ಆರೋಪಿಗಳಾದ ಗುಲ್‌ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಮ್ ಖಾನ್ ಮತ್ತು ಶಾದಬ್ ಅಹ್ಮದ್ ಅವರಿಗೆ ಜಾಮೀನು ನೀಡಿದೆ. ಆದರೆ, ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶಾರ್ಜಿಲ್ ಇಮಾಮ್ ಅವರ ಪಾತ್ರ ಭಿನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಉಮರ್ ಸಹಚರ ಬನೊಜ್ಯೋತ್ಸ್ನಾಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 'ಉಮರ್ ಅವರು, ಜೈಲೇ ನನ್ನ ಜೀವನ. ಇತರರಿಗೆ ಜಾಮೀನು ದೊರಕಿರುವುದಕ್ಕೆ ಸಂತಸವಾಗಿದೆ. ತುಂಬಾ ನಿರಾಳನಾಗಿದ್ದೇನೆ ಎಂದಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
2020ರ ಫೆಬ್ರುವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ 53 ಮಂದಿ ಮೃತಪಟ್ಟು, 700ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಾಷಣ ಮಾಡಿದ್ದ ಇಮಾಮ್ ಅವರನ್ನು 2020ರ ಜನವರಿ 28ರಂದು ಬಂಧಿಸಲಾಗಿತ್ತು. ನಂತರ, ದೊಡ್ಡ ಸಂಚು ರೂಪಿಸಿದ ಆರೋಪದಲ್ಲಿ ಆದೇ ವರ್ಷ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ಖಾಲಿದ್ ಸೆಪ್ಟೆಂಬರ್ 13ರಿಂದ ಸೆರೆಯಲ್ಲಿದ್ದಾರೆ.
ಗಲಭೆಗೆ ಸಂಚು ರೂಪಿಸಿದ ಆರೋಪದಲ್ಲಿ ಎಲ್ಲ ಏಳು ಆರೋಪಿಗಳನ್ನು ಕಾನೂನು ಬಾಹಿರ ಚುಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಹಾಗೂ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

