ಕಾಸರಗೋಡು: ದೇಶ ಗಣರಾಜ್ಯೋತ್ಸವದ ಸಂಭ್ರಮದಲ್ಲಿರುವ ಸಂದರ್ಭ ದೇಶ ಕಾಯುತ್ತಿದ್ದ ಸಂದರ್ಭ ತನ್ನ ಕಾಲುಗಳನ್ನೇ ಕಳಕೊಂಡ ವೀರಯೋಧನಿಗೆ ಟೋಲ್ ಪ್ಲಾಜಾದಲ್ಲಿ ಉಂಟಾದ ಅವಮಾನಕ್ಕೆ ನಾಗರಿಕರು ತೀವ್ರ ವಿರೋಧ ಪ್ರಕಟಿಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಧ್ಯ ಪ್ರವೇಶಿಸಿ ಟೋಲ್‍ಪ್ಲಾಜಾ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ಸಾಮಾಜಿಕ ಜಾಲ ತಾಣಗಳ ಮೂಲಕ ಆಗ್ರಹಿಸುತ್ತಿದ್ದಾರೆ.
ದೇಶದ ಎಲ್ಲಾ ಟೋಲ್ ಗೇಟ್‍ಗಳಲ್ಲಿ ಯೋಧರಿಗೆ ಟೋಲ್ ವಿನಾಯಿತಿಯೊಂದಿಗೆ ಮುಕ್ತ ಸಂಚಾರವಕಾಶ ನೀಡಲಾಗಿದ್ದರೂ, ಶಾಸ್ತಾನ ಟೋಲ್ ಗೇಟ್‍ನಲ್ಲಿ ವೀರಯೋಧ ಶ್ಯಾಮ್‍ರಾಜ್ ಎಡನೀರು ಅವರನ್ನು ಟೋಲ್ ಗೇಟ್ ಸಿಬ್ಬಂದಿ ಶುಲ್ಕ ಪಾವತಿಗೆ ಒತ್ತಾಯಿಸಿದ್ದಾನೆ. ತಾನು ಯೋಧನೆಂಬ ಅಧಿಕೃತ ದಾಖಲೆಗಳನ್ನು ತೋರಿಸಿದರೂ ಕ್ಯಾರೇ ಎನ್ನದ ಸಿಬ್ಬಂದಿ ಉದ್ಧಟತನ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದನ್ನು ತಕ್ಷಣವೇ ಚಿತ್ರೀಕರಿಸಿದಕಮಾಂಡೋ ಶ್ಯಾಮ್‍ರಾಜ್ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಲ್ಲಿ ಭಿನ್ನವಿಸುವ ಮಾತುಗಳು ಜಾಲತಾಣದಲ್ಲಿ ಹರಿದಾಡುತ್ತಿದ್ದರೆ, ಪ್ರಜ್ಞಾವಂತ ನಾಗರಿಕರು ಟೋಲ್ ಸಿಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
ಕಾಸರಗೋಡು ಕನ್ನಡಿಗರ ಬಳಗದಿಂದ ಖಂಡನೆ:
ಉಡುಪಿ ಸಾಸ್ತಾನ ಟೋಲ್ ಪ್ಲಾಝಾದಲ್ಲಿ ಭಾನುವಾರ ಅವಮಾನಿಸಿರುವ ಘಟನೆಯನ್ನು ಕಾಸರಗೋಡು ಕನ್ನಡಿಗರು ಬಳಗ ಖಂಡಿಸಿದೆ ಎಂದು ಸಂಚಾಲಕ ಜಯನಾರಾಯಣ ತಾಯನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶ ಕಾಯುವ ಕರ್ತವ್ಯದಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ್ದಷ್ಟೇ ಅಲ್ಲದೆ ಯುದ್ಧದ ವೇಳೆ ಕಾಲು ಕಳಕೊಂಡು ಅಶಕ್ತರಾಗಿ ಬಳಿಕ ನಿವೃತ್ತರಾಗಿ ದೇಶಪ್ರೇಮದ ಚಟುವಟಿಕೆಗಳಲ್ಲಿ ವ್ಯಸ್ತರಾಗಿದ್ದವರ ಮೇಲೆ ಇಂತಹ ಕ್ರೂರ ಕಾನೂನು ಕ್ರಮಗಳು ಪ್ರಜಾಪ್ರಭುತ್ವದ ಮುನ್ನಾದಿನ ನಡೆದಿರುವುದು ಪ್ರಜಾಪ್ರಭುತ್ವದ ಅಣಕವಾಗಿದ್ದು ಈ ಬಗ್ಗೆ ಕೇಂದ್ರ ಮೇಲ್ಮೈ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಅವರಿಗೆ ದೂರು ನೀಡಲಾಗುವುದೆಂದು ಪ್ರಕಟಣೆಯಲ್ಲಿ ಜಯನಾರಾಯಣ ತಾಯನ್ನೂರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿಡಿಯೋಗಳು ಹರಿದಾಡಿದ್ದು ಜನಾಕ್ರೋಶ ವ್ಯಕ್ತವಾಗಿದೆ.



