ನವದೆಹಲಿ: ಗಂಗಾ ನದಿ ಬಯಲು ಪ್ರದೇಶ ಹಾಗೂ ಹಿಮಾಲಯ ತಪ್ಪಲು ಪ್ರದೇಶಗಲ್ಲಿ ವಾಯು ಮಾಲಿನ್ಯದಿಂದ ಆಗುತ್ತಿರುವ ಅನಾಹುತಗಳ ಕುರಿತು ವಿಶ್ವಬ್ಯಾಂಕ್ ಪ್ರಕಟಿಸಿರುವ ವರದಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದೆ.
'ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ವಾಯುಮಾಲಿನ್ಯದಿಂದ ಆಗುತ್ತಿರುವ ಪರಿಣಾಮಗಳನ್ನು ಎಲ್ಲಿಯವರೆಗೆ ನಿರಾಕರಿಸಲಿದೆ? ಈ ವಿಚಾರವನ್ನು ಯಾವಾಗ ಗಂಭೀರವಾಗಿ ತೆಗೆದುಕೊಳ್ಳಲಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ವಿಶ್ವ ಬ್ಯಾಂಕ್ ಇತ್ತೀಚೆಗೆ 'ಎ ಬ್ರೀತ್ ಆಫ್ ಚೇಂಜ್' ಎಂಬ ವರದಿ ಪ್ರಕಟಿಸಿದೆ. ಇಂಡೊ- ಗಂಗಾ ನದಿ ಬಯಲು ಪ್ರದೇಶ ಹಾಗೂ ಹಿಮಾಲಯ ತಪ್ಪಲು ಪ್ರದೇಶಗಳಲ್ಲಿ (ಐಜಿಪಿ-ಎಚ್‌ಎಫ್) ವಾಯುಮಾಲಿನ್ಯದಿಂದ ಆಗುತ್ತಿರುವ ಪರಿಣಾಮಗಳ ಕುರಿತು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತ, ಬಾಂಗ್ಲಾದೇಶ, ಭೂತಾನ್, ನೇಪಾಳ ಮತ್ತು ಪಾಕಿಸ್ತಾನ ಈ ಐಜಿಪಿ-ಎಚ್‌ಎಫ್ ವ್ಯಾಪ್ತಿಯಲ್ಲಿನ ದೇಶಗಳಾಗಿವೆ. ವಾಯುಮಾಲಿನ್ಯದ ಪರಿಣಾಮ ಈ ದೇಶಗಳಲ್ಲಿ ಒಂದು ವರ್ಷದಲ್ಲಿ 10 ಲಕ್ಷದಷ್ಟು ಜನರು ಅಕಾಲಿಕವಾಗಿ ಮರಣ ಹೊಂದುತ್ತಿದ್ದಾರೆ ಎಂದು ಈ ವರದಿಯಲ್ಲಿ ವಿವರಿಸಲಾಗಿದೆ.
'ಐಜಿಪಿ-ಎಚ್‌ಎಫ್ ವ್ಯಾಪ್ತಿಯಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ವಿಶ್ವಬ್ಯಾಂಕ್ ವರದಿಯಲ್ಲಿ ಹಲವಾರು ಕ್ರಮಗಳನ್ನು ಸೂಚಿಸಲಾಗಿದೆ. ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುವ ಘಟಕಗಳು ಹೊರಸೂಸುವ ಹೊಗೆಯನ್ನು ನಿಯಂತ್ರಿಸಬೇಕು, ಹಳೆಯ ಘಟಕಗಳನ್ನು ಸ್ಥಗಿತಗೊಳಿಸಬೇಕು ಎಂಬಂತಹ ಸಲಹೆಗಳನ್ನು ನೀಡಲಾಗಿದ್ದು, ಇವುಗಳ ಬಗ್ಗೆ ಸರ್ಕಾರ ಗಮನಹರಿಸಬೇಕು' ಎಂದು ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.
'ವಾಯು ಮಾಲಿನ್ಯ(ನಿಯಂತ್ರಣ) ಕಾಯ್ದೆ ಹಾಗೂ ರಾಷ್ಟ್ರೀಯ ವಾಯು ಗುಣಮಟ್ಟ ಮಾನದಂಡಗಳನ್ನು (ಎನ್‌ಎಎಕ್ಯೂಎಸ್) ಪರಿಷ್ಕರಿಸುವಂತೆ ಕಾಂಗ್ರೆಸ್ ಒತ್ತಾಯಿಸುತ್ತಲೇ ಬಂದಿದೆ' ಎಂದೂ ಅವರು ಹೇಳಿದ್ದಾರೆ.
ಜೈರಾಮ್ ರಮೇಶ್ ಪ್ರಧಾನ ಕಾರ್ಯದರ್ಶಿ ಕಾಂಗ್ರೆಸ್ಹಣಕಾಸು ಹೊರೆ ಹಾಗೂ ಭೌಗೋಳಿಕ ವ್ಯಾಪ್ತಿ ದೃಷ್ಟಿಯಲ್ಲಿಟ್ಟುಕೊಂಡು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ(ಎನ್‌ಸಿಎಪಿ) ವಿಸ್ತರಣೆ ಇಂದಿನ ತುರ್ತು
ವರದಿಯಲ್ಲಿ ಏನಿದೆ?
* ಐಜಿಪಿ-ಎಚ್‌ಎಫ್ ವ್ಯಾಪ್ತಿಯಲ್ಲಿ ಬರುವ ದೇಶಗಳಲ್ಲಿ ಈಗಲೂ ಅಡುಗೆ ಮತ್ತು ಕಾಯಿಸುವುದಕ್ಕೆ ಸೌದೆಗಳನ್ನು ಬಳಸಲಾಗುತ್ತದೆ. ಉದ್ದಿಮೆಗಳಲ್ಲಿ ಪಳೆಯುಳಿಕೆ ಇಂಧನಗಳ ಅವೈಜ್ಞಾನಿಕ ಬಳಕೆ ಇದೆ. ಇದರಿಂದ ವಾಯುಮಾಲಿನ್ಯ ಹೆಚ್ಚುತ್ತಿದೆ
* ಇಂತಹ ಇಂಧನಗಳನ್ನು ಬಳಸಿದಾಗ ಹೊರಹೊಮ್ಮುವ ಹೊಗೆಯನ್ನು ಸಂಸ್ಕರಿಸುವ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿಲ್ಲ
* ಐಜಿಪಿ-ಎಚ್‌ಎಫ್ ವ್ಯಾಪ್ತಿಯಲ್ಲಿ ನೂರು ಕೋಟಿಯಷ್ಟು ಜನರು ಕಲುಷಿತ ಗಾಳಿಯನ್ನೇ ಉಸಿರಾಡುತ್ತಿದ್ದಾರೆ. ಇದರಿಂದ ಪ್ರತಿ ವರ್ಷ ಅಂದಾಜು 10 ಲಕ್ಷ ಜನರು ಅಕಾಲಿಕವಾಗಿ ಸಾಯುತ್ತಿದ್ದಾರೆ
* ವಾಯುಮಾಲಿನ್ಯದಿಂದಾಗಿ ಅರ್ಥಿಕವಾಗಿಯೂ ನಷ್ಟವಾಗುತ್ತಿದೆ. ಇಂತಹ ನಷ್ಟವು ಆಯಾ ಪ್ರದೇಶಗಳ ವಾರ್ಷಿಕ ಜಿಡಿಪಿಯ ಶೇ10ರಷ್ಟಾಗಲಿದೆ

