ಕಾಸರಗೋಡು: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ಕಾಸರಗೋಡು ವೆಸ್ಟ್ ಯುನಿಟ್ ವತಿಯಿಂದ ರಾಷ್ಟ್ರೀಯ ಯೋಧರ ದಿನಾಚರಣೆ ಅಂಗವಾಗಿ ಎಡನೀರು ನಿವಾಸಿ ಭಾರತೀಯ ಸೇನೆಯ ವೀರಯೋಧ, ಕಮಾಂಡೋ ಶ್ಯಾಮ್‍ರಾಜ್ ಅವರನ್ನು ಅವರ ನಿನಾಸಕ್ಕೆ ತೆರಳಿ ಗೌರವಿಸಲಾಯಿತು. ದೇಶ ಸೇವೆಯ ಸಂಕಲ್ಪತೊಟ್ಟ ಇವರು ಬೆಂಗಳೂರಿನ ಪ್ಯಾರಾಜೂಟ್ ರೆಜಿಮೆಂಟ್ ಶ್ರೇಷ್ಠ ತರಬೇತುಗಾರರಾಗಿ ಮೂಡಿಬಂದಿದ್ದು, ಸೇನೆಯ ಅನೇಕ ಕಾರ್ಯಚರಣೆಗಳಲ್ಲಿ ಸಾಹಸ ತರಬೇತಿ ಪಡೆದಿದ್ದರು. 2002ರಲ್ಲಿ ತಮ್ಮ 21ರ ಹರೆಯದಲ್ಲಿ ಕಾಶ್ಮೀರದಲ್ಲಿ ನಡೆದ ಆಪರೇಷನ್ ಪರಾಕ್ರಮ್ ಕಾರ್ಯಾಚರಣೆಯ ಸಂದರ್ಭ ಸೇನಾ ಟ್ರಕ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕಮಾಂಡೋ ಶ್ಯಾಮರಾಜ್ ಅವರ ಬೆನ್ನುಮೂಳೆಗೆ ಉಂಟಾದ ಬಲವಾಟ ಏಟಿನಿಂದ ಕಾಯಂ ಆಗಿ ಗಾಲಿಕುರ್ಚಿಯ ಜೀವನ ನಡೆಸುವಂತಾಗಿದೆ.
ಇವರ ಚಿಕಿತ್ಸಾ ಸಮಯದಲ್ಲಿ ಉಪಚರಿಸುತ್ತಿದ್ದ ಸೇನಾ ವೈದ್ಯೆ ಶಿವಪ್ರಿಯಾ ಅವರು, ಶ್ಯಾಮ್ ರಾಜ್ ಅವರನ್ನೇ ವಿವಾಹವಾಗಿದ್ದರು. ಪ್ರಸಕ್ತ ಶಿವಪ್ರಿಯ ಅವರು ಸ್ವತಃ ಸ್ವಯಂ ಸೇವಾ ಸಂಸ್ಥೆಗಳಲ್ಲಿ ರೋಗಿಗಳಿಗೆ ಪುನಶ್ಚೇತನ ಶಿಬಿರ ನಡೆಸುತ್ತಿದ್ದಾರೆ. ಅವರ ಜೀವನಾಧಾರಿತ "ಗಾಲಿ ಕುರ್ಚಿಯ ಜೀವನ ಚಕ್ರ" ಎಂಬ ವಿಷಯ ಕೇರಳದ ಐದನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ. ನಿಲ್ಲಲೂ ಸಾಧ್ಯವಾಗದೆ ಗಾಲಿ ಕುರ್ಚಿಯಲ್ಲಿ ಕುಳಿತ ಅವರ ಮುಖದಲ್ಲಿ ತೇಜಸ್ಸು ಮನಸ್ಸಿನ ಸ್ಪೂರ್ತಿದಾಯಕ ಮಾತುಗಳು ನಾಡಿಗೇ ಪ್ರೇರಣೆದಾಯಕವಾಗಿರುವುದಾಗಿ ಅಸೋಸಿಯೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ.


