ಕಾಸರಗೋಡು: ಕೇರಳ ವಿಧಾನಸಭೆಗೆ 2026ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಜಿಲ್ಲೆಯಲ್ಲಿ ಬಳಸಲಾಗುವ ಮತಯಂತ್ರಗಳು (ಇವಿಎಂ) ಮತ್ತು ವಿವಿಪ್ಯಾಟ್‍ಗಳ ಮೊದಲ ಹಂತದ ತಪಾಸಣೆ (ಎಫ್‍ಎಲ್‍ಸಿ) ಜನವರಿ 3 ರಂದು ಪ್ರಾರಂಭವಾಗಲಿದೆ.
ಕಾಸರಗೋಡು ಕಲೆಕ್ಟರೇಟ್‍ನ ಇವಿಎಂ ಗೋದಾಮಿನಲ್ಲಿ ವಿಶೇಷವಾಗಿ ಸಿದ್ಧಪಡಿಸಲಾದ ಸಭಾಂಗಣದಲ್ಲಿ ಪರೀಕ್ಷೆ ಆರಂಭಗೊಳ್ಳಲಿದ್ದು, ಜನವರಿ 25 ರವರೆಗೆ ಮುಂದುವರಿಯಲಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್)ನ ಅಧಿಕಾರಿಗಳು ಮತ್ತುಜಿಲ್ಲಾ ಚುನಾವಣಾಧಿಕಾರಿಗಳ ನೇರ ಮೇಲ್ವಿಚಾರಣೆಯಲ್ಲಿ, ಎಂಜಿನಿಯರ್‍ಗಳ ನೇತೃತ್ವದಲ್ಲಿ ತಪಾಸಣೆ ನಡೆಯಲಿದೆ.
ಚುನಾವಣಾ ಆಯೋಗದ ಪ್ರಸಕ್ತ ಸೂಚನೆಗಳ ಪ್ರಕಾರ, ಎಫ್‍ಎಲ್‍ಸಿಯಲ್ಲಿ ಯಶಸ್ವಿಯಾದ ಯಂತ್ರಗಳನ್ನು ಮಾತ್ರ ಮುಂಬರುವ ಚುನಾವಣೆಗಳಲ್ಲಿ ಬಳಸಲಾಗುವುದು. ಜಿಲ್ಲಾ ಚುನಾವಣಾ ಅಧಿಕಾರಿ ಅಲ್ಲದೆ, ಮುಖ್ಯ ಚುನಾವಣಾ ಅಧಿಕಾರಿಯೂ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳೂ ವಿವಿಧ ಹಂತಗಳಲ್ಲಿ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿದ್ದಾರೆ. ಮತದಾನ ಯಂತ್ರಗಳ ಕಾರ್ಯಕ್ಷಮತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತವು ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಿದೆ.
ಜಿಲ್ಲೆಯ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳು ತಮ್ಮ ಪ್ರತಿನಿಧಿಗಳಿಗೆ ಪರಿಶೀಲನಾ ಪ್ರಕ್ರಿಯೆಯನ್ನು ವೀಕ್ಷಿಸಲು ಅವಕಾಶ ನೀಡುವಂತೆ ಡಿಸೆಂಬರ್ 22 ರಂದು ಲಿಖಿತವಾಗಿ ಕೇಳಿಕೊಂಡ ಹಿನ್ನೆಲೆಯಲ್ಲಿ ಈ ಕುರಿತು ಅಧಿಸೂಚನೆಯನ್ನು ಜಿಲ್ಲಾ ಕೇಂದ್ರ ಮತ್ತು ರಾಜ್ಯ ಕೇಂದ್ರ ಕಚೇರಿಗಳಲ್ಲಿ ವಿತರಿಸಲಾಗಿದೆ. ಪರಿಶೀಲನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯು ಇಸಿಐ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಎಲೆಕ್ಟ್ರಾನಿಕ್ ಮತ ಯಂತ್ರ ಕೈಪಿಡಿಯಲ್ಲಿ ಲಭ್ಯವಿರುವುದಾಗಿ ಪ್ರಕಟಣೆ ತಿಳಿಸಿದೆ.

