ವಾಷಿಂಗ್ಟನ್: ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮೇಲೆ ಅಮೆರಿಕ ಸರಣಿ ದಾಳಿ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶನಿವಾರ ಮುಂಜಾನೆ ರಾಜಧಾನಿ ಕ್ಯಾರಕಾಸ್ ಮೇಲೆ ನಡೆದ ದಾಳಿಯಲ್ಲಿ ಅಮೆರಿಕದ ಪಡೆಗಳು ಭಾಗಿಯಾಗಿರುವುದನ್ನು ಟ್ರಂಪ್ ಆಡಳಿತಾಧಿಕಾರಿಗಳು ದೃಢಪಡಿಸಿದ್ದಾರೆ.
ಟ್ರಂಪ್ ಅವರ ಆದೇಶದಂತೆ ಈ ದಾಳಿ ನಡೆಸಲಾಗಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಸರಣಿ ಸ್ಫೋಟಗಳು ಸಂಭವಿಸಿದ್ದು, ರಾಜಧಾನಿ ಕ್ಯಾರಕಾಸ್‌ನಲ್ಲಿ ವಿದ್ಯುತ್ ಕಡಿತಗೊಂಡಿದೆ. ಹಲವು ಯುದ್ಧ ವಿಮಾನಗಳನ್ನು ಬಳಸಿ ಅಮೆರಿಕ ದಾಳಿ ನಡೆಸಿದೆ. ನಗರದ ದಕ್ಷಿಣ ಭಾಗದಲ್ಲಿ ಪ್ರಮುಖ ಸೇನಾ ನೆಲೆಯ ಬಳಿಯೂ ದಟ್ಟವಾದ ಹೊಗೆ ಆವರಿಸಿದೆ. ಈ ಸ್ಫೋಟದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ವೆನೆಜುವೆಲಾ ಮೇಲೆ ಅಮೆರಿಕ ದಾಳಿ ನಡೆಸುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಮೆರಿಕದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಆದರೆ ಅವರು ದಾಳಿಯ ಬಗ್ಗೆ ಯಾವುದೇ ವಿವರವನ್ನು ನೀಡಲಿಲ್ಲ.
ದಾಳಿಗೆ ಕಾರಣವೇನು?
ಮಾದಕವಸ್ತು ಕಳ್ಳಸಾಗಣಿಕೆಗೆ ವೆನೆಜುವೆಲಾ ಸಹಕಾರ ನೀಡುತ್ತಿದೆ ಎಂದು ಟ್ರಂಪ್ ಮೊದಲಿಂದಲೂ ಆರೋಪಿಸುತ್ತಾ ಬಂದಿದ್ದಾರೆ. ವೆನುಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಇದರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ದಾಳಿ ನಡೆಸುವುದಾಗಿ ಅವರು ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಬೆನ್ನಲ್ಲೇ ಇಂದು ದಾಳಿ ನಡೆದಿದೆ.
ದಾಳಿ ಖಂಡಿಸಿದ ಇರಾನ್
ವೆನೆಜುವೆಲಾದ ಮೇಲೆ ಅಮೆರಿಕದ ದಾಳಿಯನ್ನು ಇರಾನ್ ಖಂಡಿಸಿದೆ. ವೆನೆಜುವೆಲಾದ ಮೇಲಿನ ಅಮೆರಿಕದ ದಾಳಿ ದೇಶದ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯಾಗಿದೆ. ಇದನ್ನು ಬಲವಾಗಿ ಖಂಡಿಸುತ್ತೇವೆ ಎಂದು ಇರಾನಿನ ವಿದೇಶಾಂಗ ಸಚಿವಾಲಯ ಹೇಳಿದೆ.
ಇನ್ನು ವೆನೆಜುವೆಲಾದಲ್ಲಿ ನಡೆದ ದಾಳಿ ಬಗ್ಗೆ ಶ್ವೇತಭವನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ .

