ಮಲಪ್ಪುರಂ: ತಿರುನವಯದಲ್ಲಿ ಮಹಾಮಾಘ ಕುಂಭಮೇಳ ನಡೆಸಲು ಜಿಲ್ಲಾಧಿಕಾರಿ ಅಧಿಕೃತವಾಗಿ ಅನುಮತಿ ನೀಡಿದ್ದಾರೆ. ಇದು ಹಿಂದೆ ಇದ್ದ ಅನಿಶ್ಚಿತತೆ ಮತ್ತು ಅಡೆತಡೆಗಳನ್ನು ಕೊನೆಗೊಳಿಸಿದೆ. ಶತಮಾನಗಳಷ್ಟು ಹಳೆಯದಾದ ಸಂಪ್ರದಾಯದ ಭಾಗವೆಂದು ಪರಿಗಣಿಸಲಾದ ಈ ಉತ್ಸವವನ್ನು ನಿಗದಿತ ವೇಳಾಪಟ್ಟಿಯ ಪ್ರಕಾರ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಭಕ್ತರ ನಂಬಿಕೆ ಮತ್ತು ಪದ್ಧತಿಗಳನ್ನು ಗೌರವಿಸಿ ಮತ್ತು ಎಲ್ಲಾ ಕಾನೂನು ನಿಯಮಗಳನ್ನು ಅನುಸರಿಸಿ ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತೆ, ಸಂಚಾರ ನಿಯಂತ್ರಣ, ಸ್ವಚ್ಛತೆ ಮತ್ತು ನದಿಪಾತ್ರ ರಕ್ಷಣೆಯಂತಹ ವಿಷಯಗಳ ಬಗ್ಗೆಯೂ ಅಗತ್ಯ ಸೂಚನೆಗಳನ್ನು ನೀಡಲಾಗಿದೆ.
ಕೇರಳದ ಕುಂಭಮೇಳ ಎಂದೂ ಕರೆಯಲ್ಪಡುವ ತಿರುನವಯ ಮಹಾಮಾಘ ಉತ್ಸವವು ಸನಾತನ ಧರ್ಮದ ಆಧ್ಯಾತ್ಮಿಕ ಏಕತೆ ಮತ್ತು ಸಾಂಸ್ಕøತಿಕ ಪುನರುಜ್ಜೀವನವನ್ನು ಆಚರಿಸುವ ಭವ್ಯ ಸಮಾವೇಶವಾಗಿ ಮತ್ತೊಮ್ಮೆ ಇತಿಹಾಸ ನಿರ್ಮಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಇದಕ್ಕೂ ಮೊದಲು, ತಿರುನವಯದಲ್ಲಿ ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ನಿಷೇಧಿಸುವ ಸರ್ಕಾರಿ ಆದೇಶವು ಕಾನೂನುಬಾಹಿರ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.
ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಐಕ್ಯ ವೇದಿಕೆಯಂತಹ ಸಂಘಟನೆಗಳು ಸಹ ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದವು. ನೀಲಾ ನದಿಯ ದಡದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸುವ ಸರ್ಕಾರದ ಆದೇಶವು ಕುಂಭಮೇಳವನ್ನು ನಿಲ್ಲಿಸುವ ಗುರಿಯನ್ನು ಹೊಂದಿದೆ ಮತ್ತು ಸರ್ಕಾರದ ನಿಲುವನ್ನು ವಿರೋಧಿಸುವುದನ್ನು ಮುಂದುವರಿಸುತ್ತೇವೆ ಎಂದು ಹಿಂದೂ ಸಂಘಟನೆಗಳು ಹೇಳಿದ್ದವು. ಹಿಂದೂ ಸಂಘಟನೆಗಳು ತಮ್ಮ ನಿಲುವನ್ನು ಗಟ್ಟಿಗೊಳಿಸಿದ ನಂತರ ಸರ್ಕಾರ ಕುಂಭಮೇಳಕ್ಕೆ ಅನುಮತಿ ನೀಡಿತು.

