ಗುವಾಹಟಿ: ಹಿಂಸಾಚಾರ ಪೀಡಿತ ಅಸ್ಸಾಂನ ಕೊಕ್ರಝಾರ್ ಜಿಲ್ಲೆಯ ಸೂಕ್ಷ್ಮ ಸ್ಥಳಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಕೊಕ್ರಾಝಾರ್ ಜಿಲ್ಲೆಯ ಕರಿಗಾಂವ್ ಹೊರಠಾಣೆ ವ್ಯಾಪ್ತಿಯ ಮಾನ್ಸಿಂಗ್ ರಸ್ತೆಯಲ್ಲಿ ಮೂವರು ಬೊಡೊ ಸಮುದಾಯದವರನ್ನು ಕರೆದೊಯ್ಯುತ್ತಿದ್ದ ವಾಹನವು ಇಬ್ಬರು ಆದಿವಾಸಿ ವ್ಯಕ್ತಿಗಳಿಗೆ ಡಿಕ್ಕಿ ಹೊಡೆದಿದೆ.
ಇದರಿಂದ ಕೆರಳಿದ ಆದಿವಾಸಿಗಳು ಮೂವರು ಬೊಡೊಗಳನ್ನು ಥಳಿಸಿ, ವಾಹನಕ್ಕೆ ಬೆಂಕಿ ಹಚ್ಚಿದ್ದರು.
ನಿನ್ನೆ (ಮಂಗಳವಾರ) ನಡೆದ ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ಕರಿಗಾಂವ್ ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಸೇನಾ ಸಿಬ್ಬಂದಿ ಜಿಲ್ಲಾಡಳಿತದೊಂದಿಗೆ ಗಸ್ತು ತಿರುಗಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು ನಾಲ್ಕು ಸೇನಾ ತುಕಡಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೊಕ್ರಾಝಾರ್ ಮತ್ತು ನೆರೆಯ ಚಿರಾಂಗ್ ಜಿಲ್ಲೆಯಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

