ನವದೆಹಲಿ: ಜೋಧಪುರದ ಕೇಂದ್ರ ಕಾರಾಗೃಹದಲ್ಲಿರುವ ಪರಿಸರ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರನ್ನು ತಜ್ಞ ವೈದ್ಯರಿಂದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ.
ಮಲಿನಗೊಂಡಿರುವ ನೀರು ಕುಡಿದು ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವಾಂಗ್ಚೂಕ್ ಅವರು ದೂರು ನೀಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಹಾಗೂ ಪಿ.ಬಿ.ವರಾಳೆ ಅವರು, ವಾಂಗ್ಚೂಕ್ ಅವರ ವೈದ್ಯಕೀಯ ತಪಾಸಣೆಯ ವರದಿಯನ್ನು, ಸೋಮವಾರ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದರು.
ವಾಂಗ್ಚೂಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಅವರು, 'ನಾವು ನೀಡುವ ನೀರನ್ನು ವಾಂಗ್ಚೂಕ್ ಅವರಿಗೆ ಕೊಡಬೇಕು. ಅವರಿಗೆ ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ವಾರಕ್ಕೊಮ್ಮೆ ಅವರಿಗೆ ವೈದ್ಯಕೀಯ ತಪಾಸಣೆ ಮಾಡಿಸಬೇಕು' ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.
ರಾಜಸ್ಥಾನ ಸರ್ಕಾರದ ಪರವಾಗಿ ಹಾಜರಾಗಿದ್ದ ವಕೀಲರು, 'ಕಳೆದ 4 ತಿಂಗಳಲ್ಲಿ 21 ಬಾರಿ ವಾಂಗ್ಚೂಕ್ ಅವರಿಗೆ ಜೈಲಿನಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಂದ ತಪಾಸಣೆ ನಡೆಸಲಾಗಿದೆ' ಎಂದು ಪೀಠಕ್ಕೆ ತಿಳಿಸಿದರು.
ವಾಂಗ್ಚೂಕ್ ಅವರಿಗೆ 'ಗ್ಯಾಸ್ಟ್ರೋ ಎಂಟರಾಲಜಿ' (ಜಠರ ಕರುಳು ವಿಜ್ಞಾನ ತಜ್ಞ) ತಜ್ಞ ವೈದ್ಯರ ಅಗತ್ಯವಿದೆ ಎಂದು ಪೀಠವು ಅಭಿಪ್ರಾಯಪಟ್ಟಿತು.
ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಪೊಲೀಸರ ಗುಂಡಿಗೆ ನಾಲ್ವರು ಮೃತಪಟ್ಟಿದ್ದರು. ಹಿಂಸಾಚಾರದಲ್ಲಿ 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ವಾಗ್ಚೂಕ್ ಅವರನ್ನು ಬಂಧಿಸಲಾಗಿತ್ತು.

