ನವದೆಹಲಿ: ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ'(ಎಸ್‌ಐಆರ್) ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಿದ್ದು, ಈ ಸಂಬಂಧಿಸಿದ ತನ್ನ ತೀರ್ಪನ್ನು ಗುರುವಾರ ಕಾಯ್ದಿರಿಸಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಎನ್‌ಜಿಒ ಸೇರಿದಂತೆ ವಿವಿಧ ಸಂಸ್ಥೆಗಳು, ವ್ಯಕ್ತಿಗಳು ಎಸ್‌ಐಆರ್ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಿದೆ.
ಆಯೋಗದ ಪರ ವಕೀಲರಾದ ರಾಕೇಶ್ ದ್ವಿವೇದಿ, ಮಣಿಂದರ್ ಸಿಂಗ್ ಅವರ ವಾದ ಹಾಗೂ ಅರ್ಜಿದಾರರ ಪರ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಸಿಂಘ್ವಿ, ಪ್ರಶಾಂತ್ ಭೂಷಣ್, ಗೋಪಾಲ್ ಶಂಕರ ನಾರಾಯಣ ಅವರ ಪ್ರತಿವಾದವನ್ನು ಆಲಿಸಿದ ಬಳಿಕ ಪೀಠವು ತನ್ನ ತೀರ್ಪು ಕಾಯ್ದಿರಿಸಿತು.
ಬೀದಿ ನಾಯಿ ಪ್ರಕರಣ: ಆದೇಶ ಕಾಯ್ದಿರಿಸಿದ 'ಸುಪ್ರೀಂ' ಬೀದಿ ನಾಯಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ಆದೇಶವನ್ನು ಪರಿಶೀಲಿಸಲು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತಾದ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ತಮಿಳುನಾಡು ಉತ್ತರ ಪ್ರದೇಶ ಹಾಗೂ ರಾಜಸ್ಥಾನದಂತಹ ರಾಜ್ಯಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಅಮಿಕಸ್ ಕ್ಯೂರಿ ಗೌರವ್ ಅಗರ್ವಾಲ್ ಅವರು ಸಂಕ್ಷಿಪ್ತವಾಗಿ ವಿವರಿಸಿ ಮಂಡಿಸಿದ ವಾದವನ್ನು ಆಲಿಸಿದ ಬಳಿಕ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಸಂದೀಪ್ ಮೆಹ್ತಾ ಹಾಗೂ ಎನ್.ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠವು ತೀರ್ಪನ್ನು ಕಾಯ್ದಿರಿಸಿದೆ.

