ಕೋಟಾ: ಎಲ್ಲ ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಮತ್ತು ವೃತ್ತಿ ಸಲಹೆಗಾರರ ನೇಮಕವನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಕಡ್ಡಾಯಗೊಳಿಸಿದೆ.
500 ವಿದ್ಯಾರ್ಥಿಗಳಿಗೆ ತಲಾ ಒಬ್ಬರನ್ನು ನೇಮಿಸಿಕೊಳ್ಳುವಂತೆ ಸಿಬಿಎಸ್‌ಇ ಜ.19ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.
ಸಿಬಿಎಸ್‌ಇ ಮಾನ್ಯತೆ ಪಡೆದಿರುವ ಎಲ್ಲ ಶಾಲೆಗಳಿಗೆ ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.
ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಬಲಪಡಿಸುವ ಮತ್ತು ಅವರಿಗೆ ವೃತ್ತಿ ಮಾರ್ಗದರ್ಶನ ನೀಡುವ ಗುರಿ ಹೊಂದಿರುವ ಮಹತ್ವದ ನೀತಿ ಸುಧಾರಣೆಯಡಿ ಸಿಬಿಎಸ್‌ಇ ಈ ಕ್ರಮ ಕೈಗೊಂಡಿದೆ.
ಕೋಟಾದ ವಕೀಲ ಸುಜೀತ್ ಸ್ವಾಮಿ ಮತ್ತು ಕೆಲವು ಮನೋವಿಜ್ಞಾನ ತಜ್ಞರು 2025ರ ಜುಲೈನಲ್ಲಿ ರಾಜಸ್ಥಾನ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸಲ್ಲಿಸಿದ ನಂತರ, ರಾಷ್ಟ್ರೀಯ ಶಿಕ್ಷಣ ಮಂಡಳಿಯು ಸಿಬಿಎಸ್‌ಇ ನಿಬಂಧನೆಗಳಲ್ಲಿ ತಿದ್ದುಪಡಿ ಮಾಡಿದೆ.
ರಾಜಸ್ಥಾನ ಹೈಕೋರ್ಟ್ 2025ರ ಸೆಪ್ಟೆಂಬರ್‌ನಲ್ಲಿ ವಿಚಾರಣೆ ನಡೆಸಿದ ಸಂದರ್ಭ ಸಿಬಿಎಸ್‌ಇ, ಆರ್‌ಬಿಎಸ್‌ಇ, ವಿಶ್ವವಿದ್ಯಾಲಯ ಧನಸಹಾಯ ಆಯೋಗ ಮತ್ತು ರಾಜ್ಯ ಸರ್ಕಾರದಿಂದ ಪ್ರತಿಕ್ರಿಯೆ ಕೋರಿತ್ತು.
ಪ್ರತಿಕ್ರಿಯೆ ಸಲ್ಲಿಸಿದ ಬಳಿಕ ಸಿಬಿಎಸ್‌ಇ ಈ ಸುತ್ತೋಲೆ ಹೊರಡಿಸಿದೆ.
ಶೈಕ್ಷಣಿಕ ಒತ್ತಡ ಮತ್ತು ರಚನಾತ್ಮಕ ವೃತ್ತಿ ಮಾರ್ಗದರ್ಶನದ ಕೊರತೆ ಸೇರಿದಂತೆ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸವಾಲುಗಳನ್ನು ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ.

