ತಿರುವನಂತಪುರಂ: ಕೇರಳ ಕಾಂಗ್ರೆಸ್‌ನ ಉಚ್ಚಾಟಿತ ಶಾಸಕ ರಾಹುಲ್ ಮಮ್ಕೂಟತಿಲ್ರನ್ನು ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದು, ಇದು ಚುನಾವಣೆ ಸಮಯದಲ್ಲಿ ಪಕ್ಷವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ರಾಜ್ಯ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರೂ ಆಗಿರುವ 37 ವರ್ಷದ ರಾಹುಲ್ ಮಮ್ಕೂಟತಿಲ್, ಈ ಹಿಂದೆ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದರು.
ಮೊದಲ ದೂರಿನ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾಗಲೇ 2025ರ ನವೆಂಬರ್ನಲ್ಲಿ ಪಾಲಕ್ಕಾಡ ಶಾಸಕನ ವಿರುದ್ಧ ಎರಡನೇ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಪ್ರಕರಣ; ಕಾಂಗ್ರೆಸ್‌ನ ಉಚ್ಚಾಟಿತ ಶಾಸಕ ರಾಹುಲ್ ಮಮ್ಕೂಟತಿಲ್ಗೆ ಮತ್ತೆ ಜೈಲು ವಾಸ! Rahul Mamkootathil
ಮೊದಲಿನ ಪ್ರಕರಣಗಳು
2023 ರಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದ್ದು, ಮದುವೆಯ ನೆಪದಲ್ಲಿ ಮಹಿಳೆಯೊಬ್ಬಳನ್ನು ರೆಸಾರ್ಟ್‌ಗೆ ಕರೆದೊಯ್ದು ಹಲ್ಲೆ ನಡೆಸಿ ತೀವ್ರ ಗಾಯ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಕೇರಳ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.
ಎರಡನೇ ಪ್ರಕರಣದಲ್ಲಿ ಇದೇ ರೀತಿಯ ಶೋಷಣೆ, ಸುಳ್ಳು ವಿವಾಹ ಭರವಸೆಗಳು, ಶಿಫಾರಸು ಮಾಡದ ಔಷಧಿಗಳ ಮೂಲಕ ಬಲವಂತದ ಗರ್ಭಪಾತ ಕೊಲೆ ಬೆದರಿಕೆಗಳು ಮತ್ತು ಐಟಿ ಕಾಯ್ದೆಯ ಉಲ್ಲಂಘನೆ ಕುರಿತಾದ ಆರೋಪಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿಯಾಗಿ ತಿಳಿಸಲಾಗಿತ್ತು. ಈ ಪ್ರಕರಣದಲ್ಲೂ ತಿರುವನಂತಪುರಂ ಸೆಷನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು.
ಮೊದ ಮೊದಲು ಕಾಂಗ್ರೆಸ್‌ನಲ್ಲಿ ಮಮ್ಕೂಟತಿಲ್ಗೆ ಹಲವಾರು ನಾಯಕರ ಬೆಂಬಲವಿತ್ತು. ಇತ್ತ ಮಾಜಿ ಸಿಎಂ ದಿವಂಗತ ಉಮ್ಮನ್ ಚಾಂಡಿ ರಾಹುಲ್ಗೆ ದೊಡ್ಡ ಹುದ್ದೆಗಳನ್ನು ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಕಾಂಗ್ರೆಸ್‌ನ ಅನೇಕ ನಾಯಕರು ಹೇಳುತ್ತಾರೆ. ಪಾಲಕ್ಕಾಡ ಶಾಸಕರ ವರ್ತನೆ ಕುರಿತಾಗಿ ಅನೇಕ ಮಹಿಳಾ ಮುಖಂಡರು ಸಹ ಎಚ್ಚರಿಕೆ ನೀಡಿದ್ದರು ಎಂದು ವರದಿಯಾಗಿದೆ.
ಮಮ್ಕೂಟತಿಲ್ರನ್ನು ಪಕ್ಷ ವಜಾಗೊಳಿಸಿದ್ದರೂ, ಕಾಂಗ್ರೆಸ್‌ಗೆ ಒಂದು ಕಾಲದಲ್ಲಿ ಭರವಸೆಯ ಯುವ ನಾಯಕನಾಗಿ ಕಂಡಿದ್ದ ವ್ಯಕ್ತಿಯ ಅನುಪಸ್ಥಿತಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣಾ ಕಣಕ್ಕೆ ಧುಮುಕಬೇಕಾಗಿದೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗವು ಈ ಆರೋಪಗಳನ್ನು ಬಳಸಿಕೊಳ್ಲಲು ಪ್ರಯತ್ನಿಸಲಿದ್ದು, ರಾಹುಲ್ ಮಮ್ಕೂಟತಿಲ್ ಕಾಂಗ್ರೆಸ್‌ಗೆ ಅವಮಾನದ ಮೂಲವಾಗಿದ್ದಾರೆ. ನೈತಿಕವಾಗಿ, ಕಾಂಗ್ರೆಸ್ ಚುನಾವಣೆಗಳಲ್ಲಿ ಸ್ಪರ್ಧಿಸಲು ಸಹ ವಿಫಲವಾಗಿದೆ ಎಂದು ಹೈಕೋರ್ಟ್ ಹಿರಿಯ ವಕೀಲ ಎ. ಜಯಶಂಕರ್ ಟೀಕಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ರಾಹುಲ್ರನ್ನು ಉಚ್ಛಾಟಿಸುವ ಮೂಲಕ ಅವರೊಂದಿಗೆ ಅಂತರ ಕಾಯ್ದುಕೊಂಡಿದೆ. ಈ ಹಿಂದಿನ ಫಲಿತಾಂಶಗಳನ್ನು ಗಮನಿಸುವುದಾದರೆ ಪಕ್ಷವು ಮುಂದಿನ ಚುನಾವಣೆಯಲ್ಲಿ ಶೇ. 35 ರಷ್ಟು ಮತಗಳನ್ನು ಪಡೆಯುವ ನಿರೀಕ್ಷೆ ಇದೆ. ಇತ್ತ ಪಕ್ಷವು ಯುವಕರು ಮತ್ತು ಮಹಿಳೆಯರ ಮತಗಳನ್ನು ಗಣನೀಯ ಪ್ರಮಾಣದಲ್ಲಿ ಕಳೆದುಕೊಂಡರೆ ಪರಿಸ್ಥಿತಿ ದೊಡ್ಡ ಮಟ್ಟದಲ್ಲಿ ಬದಲಾಗಬಹುದು. ಈ ಪ್ರಕರಣದಲ್ಲಿ ಸರ್ಕಾರ ಹೇಗೆ ನಡೆದುಕೊಳ್ಳುತ್ತದೆ ಎನ್ನುವುದರ ಮೇಲೆ ರಾಜ್ಯ ರಾಜಕೀಯ ನಿರ್ಧಾರವಾಗಲಿದೆ.

