ಕಾಸರಗೋಡು ಎಡನೀರಿನ ಶ್ಯಾಮರಾಜ್ ಇವಿ 21ನೇ ಪ್ಯಾರಾ ಸ್ಪೆಶಲ್ ಫೋರ್ಸ್‌ನ ಪ್ಯಾರಾಟ್ರೂಪರ್ ಆಗಿದ್ದು, ಇವರು ಸಾಸ್ತಾನದ ಟೋಲ್ ಮೂಲಕ ಸಾಗುತ್ತಿದ್ದರು.
ಇವರಲ್ಲಿ ಟೋಲ್ ವಿನಾಯಿತಿ ಬಗ್ಗೆ ಪತ್ರವಿದ್ದರೂ, ಟೋಲ್ ವಿನಾಯಿತಿ ನೀಡುವುದಕ್ಕೆ ಟೋಲ್ ಸಿಬ್ಬಂದಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಇವರ ಪತ್ನಿ ಕೂಡ ಮಿಲಿಟರಿ ನರ್ಸಿಂಗ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರ ಪೋಸ್ಟಿಂಗ್‌ಗಾಗಿ ಅವರು ಸಾಸ್ತಾನ ಮೂಲಕ ತೆರಳುತ್ತಿದ್ದರು.
ಈ ಬಗ್ಗೆ ಸ್ವತಃ ಶ್ಯಾಮರಾಜ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ದೇಶದ ಎಲ್ಲಾ ಟೋಲ್‌ಗಳಲ್ಲಿ ವಿನಾಯಿತಿ ನೀಡಿದರೂ ಸಾಸ್ತಾನ ಟೋಲ್‌ನಲ್ಲಿ ವಿನಾಯಿತಿ ನೀಡಿಲ್ಲ. ಇದಕ್ಕೆ ಸಂಬಂಧಿತ ಆರ್‌ಎಂಎ ನೀಡಿದ ಟೋಲ್ ವಿನಾಯಿತಿ ಪತ್ರ ತೋರಿಸಿದರೂ ಸಿಬ್ಬಂದಿ ವಿನಾಯಿತಿ ನೀಡಿಲ್ಲ ಎಂದು ಅವರು ದೂರಿದರು.
ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಗಣರಾಜ್ಯೋತ್ಸವ ದಿನದಂದು ನಿವೃತ್ತ ಸೈನಿಕನೋರ್ವನಿಗೆ ಮಾಡಿದ ಅವಮಾನದ ಬಗ್ಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಬಳಿಕ ಟೋಲ್ ಸಿಬ್ಬಂದಿ ತನ್ನ ತಪ್ಪನ್ನು ಅರಿತು ಶ್ಯಾಮರಾಜ್ ಅವರಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.
ಶ್ಯಾಮರಾಜ್ ಆಪರೇಶನ್ ಪರಾಕ್ರಮ್ ವೇಳೆ ಉಗ್ರರ ವಿರುದ್ಧ ಜಯ ಸಾಧಿಸಿ ವಾಪಾಸು ಬರುವ ವೇಳೆ ಇವರ ವಾಹನ ಲ್ಯಾಂಡ್ ಮೈನ್ಸ್ ಮೇಲೆ ಹರಿದ ಪರಿಣಾಮ, ಲ್ಯಾಂಡ್ ಮೈನ್ಸ್ ಸ್ಪೋಟಗೊಂಡು ವಾಹನ ಜಖಂ ಗೊಂಡಿತ್ತು. ಈ ಘಟನೆಯಲ್ಲಿ 15 ಸೈನಿಕರು ಹುತಾತ್ಮರಾಗಿ ಇಬ್ಬರು ಸೈನಿಕರು ಬದುಕುಳಿದಿದ್ದರು. ಈ ಬದುಕುಳಿದ ಸೈನಿಕರಲ್ಲಿ ಶ್ಯಾಮರಾಜ್ ಕೂಡ ಒಬ್ಬರು. ಹದಿನೈದು ದಿನಗಳ ಕಾಲ ಕೋಮಾದಲ್ಲಿ ನಂತರ ಯಥಾ ಸ್ಥಿತಿಗೆ ಬಂದರೂ ಬೆನ್ನು ಮೂಳೆಗೆ ಗಂಭೀರ ಗಾಯವಾದ ಹಿನ್ನೆಲೆ ಇವರು ಸಂಪೂರ್ಣ ವಿಕಲಾಂಗರಾದರು.
ವ್ಯಾಪಕ ಖಂಡನೆ:
ಘಟನೆ ವ್ಯೆರಲ್ ಆಗುತ್ತಿರುವಂತೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಬಗ್ಗೆ ಕಾಸರಗೋಡು ಕನ್ನಡಿಗರು ತಂಡದ ಸಂಚಾಲಕ ಜಯನಾರಾಯಣ ತಾಯನ್ನೂರ್ ಖೇದ ವ್ಯಕ್ತಪಡಿಸಿದ್ದು, ಕೇಂದ್ರ ಮೇಲ್ಮ್ಯೆ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆಯಲಾಗುವುದೆಂದು ತಿಳಿಸಿದ್ದಾರೆ.

