HEALTH TIPS

ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲೂ ವಿರುದ್ಧ ದೋಷಾರೋಪ ನಿಗದಿಗೆ ಆದೇಶ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ, ಮಾಜಿ ರೈಲ್ವೆ ಸಚಿವ ಲಾಲೂ ಪ್ರಸಾದ್‌, ಅವರ ಕುಟುಂಬಸ್ಥರು ಹಾಗೂ ಇತರರ ವಿರುದ್ಧ ದೋಷಾರೋಪ ನಿಗದಿಪಡಿಸಲು ದೆಹಲಿ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ.

ವಿಶೇಷ ನ್ಯಾಯಮೂರ್ತಿ ವಿಶಾಲ್ ಗೋಗ್ನೆ ಅವರು, 'ಲಾಲೂ ಅವರು ರೈಲ್ವೆ ಸಚಿವಾಲಯವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ.

ಭೂಕಬಳಿಕೆಗಾಗಿ ಸಾರ್ವಜನಿಕ ಉದ್ಯೋಗವನ್ನು ಚೌಕಾಸಿ ಅಸ್ತ್ರವಾಗಿ ಬಳಸಿಕೊಳ್ಳಲಾಗಿದೆ' ಎಂದು ಹೇಳಿದರು.

ಆದೇಶದ ಕೆಲವು ಅಂಶಗಳನ್ನು ಮೌಖಿಕವಾಗಿ ಪ್ರಸ್ತುತಪಡಿಸಿದ ಅವರು, 'ಗಂಭೀರ ಪಿತೂರಿ ನಡೆದಿರುವುದಕ್ಕೆ ಬಲವಾದ ಸಾಕ್ಷ್ಯಗಳನ್ನು ಸಿಬಿಐ ಅಂತಿಮ ವರದಿಯು ಬಹಿರಂಗಪಡಿಸಿದೆ' ಎಂದು ಹೇಳಿದರು.

ಇದೇ ವೇಳೆ, ಲಾಲೂ ಪ್ರಸಾದ್ ಮತ್ತು ಅವರ ಕುಟುಂಬದ ಸದಸ್ಯರು ಬಿಡುಗಡೆಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ತಿರಸ್ಕರಿಸಿದರು.

'ಮಾಜಿ ರೈಲ್ವೆ ಸಚಿವ ಮತ್ತು ಇತರರು ಭೂಮಿ ಪಡೆಯಲು ಅಕ್ರಮ ಎಸಗಿದ್ದಾರೆ. ಹೀಗಾಗಿ ಅವರ ಬಿಡುಗಡೆ ಕೋರಿದ ಅರ್ಜಿ ಅಸಮರ್ಥನೀಯ' ಎಂದು ಕಟುವಾಗಿ ಹೇಳಿದರು.

ರೈಲ್ವೆ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಒತ್ತಿ ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 41 ಮಂದಿ ವಿರುದ್ಧ ದೋಷಾರೋಪ ನಿಗದಿಪಡಿಸಿದೆ ಮತ್ತು 52 ಮಂದಿಯನ್ನು ಬಿಡುಗಡೆ ಮಾಡಿದೆ.

ಬಳಿಕ ನ್ಯಾಯಾಲಯವು ವಿಚಾರಣೆಯನ್ನು ಜನವರಿ 23ಕ್ಕೆ ಮುಂದೂಡಿತು.

ಹಗರಣಕ್ಕೆ ಸಂಬಂಧಿಸಿದಂತೆ ಲಾಲೂ ಪ್ರಸಾದ್‌, ಅವರ ಪತ್ನಿ ರಾಬ್ಡಿ ದೇವಿ, ಪುತ್ರ ತೇಜಸ್ವಿ ಯಾದವ್‌ ಮತ್ತು ಇತರರ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಲಾಲೂ ಪ್ರಸಾದ್ ಅವರು 2004-2009ರ ನಡುವೆ ರೈಲ್ವೆ ಸಚಿವರಾಗಿದ್ದಾಗ ಮಧ್ಯಪ್ರದೇಶದ ಜಬಲ್‌ಪುರ ರೈಲ್ವೆಯ ಪಶ್ಚಿಮ ಕೇಂದ್ರ ವಲಯದಲ್ಲಿ 'ಡಿ' ಗ್ರೂಪ್‌ ನೌಕರರ ನೇಮಕಾತಿ ನಡೆದಿತ್ತು. ಈ ಸಂದರ್ಭದಲ್ಲಿ ಲಾಲೂ ಅವರು ಉದ್ಯೋಗ ಪಡೆದವರಿಂದ ಭೂಮಿಯನ್ನು ಪಡೆದು, ಕುಟುಂಬದ ಸದಸ್ಯರು ಮತ್ತು ಸಂಬಂಧಿಕರ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಕೋರ್ಟ್‌ ಆದೇಶ ಸ್ವಾಗತಿಸಿದ ಎನ್‌ಡಿಎ

ಪಟ್ನಾ: ಲಾಲೂ ಪ್ರಸಾದ್‌ ಮತ್ತು ಅವರ ಕುಟುಂಬಸ್ಥರ ವಿರುದ್ಧ ದೋಷಾರೋಪ ನಿಗದಿಗೆ ಸೂಚಿಸಿರುವ ದೆಹಲಿ ಹೈಕೋರ್ಟ್ ಆದೇಶವನ್ನು ಬಿಹಾರ ಎನ್‌ಡಿಎ ಸ್ವಾಗತಿಸಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಸಂಜಯ್‌ ಸರಗೋಯ್‌ ಅವರು 'ಕಾನೂನೇ ಸರ್ವೋಚ್ಚ. ಹಗರಣ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾದವರು ಕಾನೂನು ಕ್ರಮ ಎದುರಿಸಲೇಬೇಕು' ಎಂದು ಹೇಳಿದರು. 'ಭ್ರಷ್ಟಾಚಾರ ಎಸಗಿದವರು ಕಾನೂನಿನ ಮುಂದೆ ತಲೆಬಾಗಲೇಬೇಕು. ಹಗರಣದಲ್ಲಿ ಭಾಗಿಯಾದವರ ವಿರುದ್ಧ ನ್ಯಾಯಾಲಯವು ದೋಷಾರೋಪ ಹೊರಿಸಲಿದೆ ಮತ್ತು ಅವರ ವಿರುದ್ಧ ಸೂಕ್ತ ತೀರ್ಪು ಪ್ರಕಟಿಸಲಿದೆ' ಎಂದರು .

ರಾಜಕೀಯ ದ್ವೇಷದ ಕ್ರಮ: ಆರ್‌ಜೆಡಿ ವಕ್ತಾರ

ಮೃತ್ಯುಂಜಯ ತಿವಾರಿ ಅವರು 'ರಾಜಕೀಯ ದ್ವೇಷದಿಂದ ಕೇಂದ್ರ ಸರ್ಕಾರದ ಆಣತಿಯಂತೆ ತನಿಖಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ' ಎಂದು ಆರೋಪಿಸಿದರು. 'ಇದಕ್ಕೂ ಮುನ್ನ ಪ್ರಕರಣವನ್ನು ಅಂತ್ಯಗೊಳಿಸಲಾಗಿತ್ತು. ಆದರೆ ಕೇಂದ್ರದ ನಿರ್ದೇಶನದಂತೆ ತನಿಖಾ ಸಂಸ್ಥೆಗಳು ಪ್ರಕರಣದ ಬಗ್ಗೆ ಮತ್ತೆ ತನಿಖೆ ಆರಂಭಿಸಿದವು. ಲಾಲೂ ಪ್ರಸಾದ್‌ ಮತ್ತು ಆರ್‌ಜೆಡಿ ಜೊತೆ ರಾಜಕೀಯವಾಗಿ ಸ್ಪರ್ಧಿಸಲು ವಿಫಲವಾಗಿರುವ ಬಿಜೆಪಿಯು ಈ ಮಾರ್ಗದ ಮಣಿಸುವ ಯತ್ನ ನಡೆಸಿದೆ. ಈ ಮೂಲಕ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ' ಎಂದು ದೂರಿದರು. ಪಕ್ಷವು ನ್ಯಾಯ ಸಿಗುವವರೆಗೂ ಕಾನೂನು ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries