ದಾವೋಸ್: ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಂವಾದ ಕಾರ್ಯಕ್ರಮವೊಂದರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 'ಶಾಂತಿ ಮಂಡಳಿ' ಅನ್ನು ಉದ್ಯಮಿ ಎಲಾನ್ ಮಸ್ಕ್ ಟೀಕಿಸಿದ್ದಾರೆ.
ಈ ಕುರಿತು ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
'ಶಾಂತಿ ಮಂಡಳಿ ರಚನೆ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಅದು ಪೀಸ್ ಅಥವಾ ಪೀಸ್? ಗ್ರೀನ್‌ಲ್ಯಾಂಡ್‌ನ ಒಂದು ಪೀಸ್ (ತುಂಡು), ವೆನೆಜುವೆಲಾದ ಇನ್ನೊಂದು ಪೀಸ್ (ತುಂಡು)' ಎಂದು ವ್ಯಂಗ್ಯವಾಡಿದ್ದಾರೆ.
ಗಾಜಾದಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡುವ ಉದ್ದೇಶದಿಂದ ಟ್ರಂಪ್ 'ಶಾಂತಿ ಮಂಡಳಿ' ರಚಿಸಿದ್ದರು. ಈಗಾಗಲೇ ಪಾಕಿಸ್ತಾನ, ಯುಎಇ, ಸೌದಿ ಅರೇಬಿಯಾ, ಈಜಿಪ್ಟ್ ಸೇರಿ ಹಲವು ರಾಷ್ಟ್ರಗಳು ಈ ಮಂಡಳಿ ಸೇರಿವೆ.
ಆದರೆ ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಅವರನ್ನು ಸೆರೆ ಹಿಡಿದಿರುವುದು ಮತ್ತು ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವ ಟ್ರಂಪ್ ಅವರ ಯೋಜನೆಯು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಎಲಾನ್ ಮಸ್ಕ್ ಬೆಂಬಲದೊಂದಿಗೆ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಟ್ರಂಪ್ ಅವರ ಚುನಾವಣಾ ಪೂರ್ವ ಪ್ರಚಾರದಲ್ಲೂ ಮಸ್ಕ್ ಸಕ್ರಿಯರಾಗಿ ಭಾಗವಹಿಸಿದ್ದರು. ಟ್ರಂಪ್ ಆಡಳಿತದಲ್ಲಿ ಮಸ್ಕ್ ಪ್ರಮುಖ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದರು. ಆದರೆ ಬಳಿಕ ಇಬ್ಬರ ಮಧ್ಯೆ ಭಿನ್ನಮತ ಉಂಟಾಗಿತ್ತು. ಅದಾದ ಬಳಿಕ ಟ್ರಂಪ್ ಆಡಳಿತದಲ್ಲಿ ಹುದ್ದೆಯನ್ನು ಮಸ್ಕ್ ತೊರೆದಿದ್ದರು.

