HEALTH TIPS

ಗಂಗಾರತಿ ಸಾಂಸ್ಕೃತಿಕ, ನಾಗರಿಕತೆಯ ಪರಂಪರೆ: ಆಚರಣೆ ಮುಂದುವರಿಸಲು ಕೋರ್ಟ್ ಸಮ್ಮತಿ

ಡೆಹ್ರಾಡೂನ್‌: ಋಷಿಕೇಶದ ತ್ರಿವೇಣಿ ಘಾಟ್‌ನಲ್ಲಿ ನಡೆಯುವ ಗಂಗಾರತಿ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಕೆಲವು ಷರತ್ತುಗಳ ಅನ್ವಯ ಆಚರಣೆಯನ್ನು ಮುಂದುವರಿಸಲು ಶ್ರೀ ಗಂಗಾ ಸಭಾಕ್ಕೆ ಉತ್ತರಾಖಂಡ ಹೈಕೋರ್ಟ್ ಅನುಮತಿ ನೀಡಿದೆ.

ಸಾರ್ವಜನಿಕ ಹಿತಾಸಕ್ತಿ ಮತ್ತು ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಮೂರ್ತಿ ಆಶಿಶ್ ನೈಂಥಾನಿ ನೇತೃತ್ವದ ರಜಾ ಪೀಠವು ಶುಕ್ರವಾರ ಈ ನಿರ್ಧಾರ ಪ್ರಕಟಿಸಿದೆ.

ಋಷಿಕೇಶ ಮಹಾನಗರ ಪಾಲಿಕೆಯು ಪ್ರಸ್ತಾವನೆಯನ್ನು ಅಂಗೀಕರಿಸಿ ಶ್ರೀ ಗಂಗಾ ಸಭಾ ಆರತಿ ನಡೆಸುವುದನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿದ ನಂತರ ಈ ಪ್ರಕರಣ ಮುನ್ನೆಲೆಗೆ ಬಂದಿದೆ.

ಶ್ರೀ ಗಂಗಾ ಸಭಾದ ನೋಂದಣಿ ಅವಧಿ ಮುಗಿದಿದ್ದು, ಆರತಿ ನಡೆಸಲು ಅದಕ್ಕೆ ಯಾವುದೇ ಕಾನೂನುಬದ್ಧ ಹಕ್ಕಿಲ್ಲ ಎಂದು ಋಷಿಕೇಶ ಮಹಾನಗರ ಪಾಲಿಕೆಯ ಪರ ವಕೀಲರು ವಾದಿಸಿದ್ದರು.

ಇಷ್ಟೇ ಅಲ್ಲದೆ, ಶ್ರೀ ಗಂಗಾ ಸಭಾದ ವಿರುದ್ಧ ವ್ಯಾಪಾರಿಕ ಶೋಷಣೆ ಮತ್ತು ಕಸ ಸುರಿಯುವ ಆರೋಪಗಳನ್ನು ಹೊರಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಶ್ರೀ ಗಂಗಾ ಸಭಾ ಋಷಿಕೇಶ ಮಹಾನಗರ ಪಾಲಿಕೆಯ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಗಂಗಾರತಿಯ ಮಹತ್ವವನ್ನು ಒತ್ತಿ ಹೇಳಿದ ಹೈಕೋರ್ಟ್, 'ಇದು ಕೇವಲ ಧಾರ್ಮಿಕ ಆಚರಣೆಯಲ್ಲ. ಬದಲಾಗಿ, ಭಾರತೀಯ ಉಪಖಂಡದ ಪ್ರಾಚೀನ ಸಾಂಸ್ಕೃತಿಕ ಮತ್ತು ನಾಗರಿಕ ಪರಂಪರೆಯಾಗಿದ್ದು, ಇದನ್ನು ಹಠಾತ್ತನೆ ನಿಲ್ಲಿಸುವುದು ತಪ್ಪು' ಎಂದು ಹೇಳಿದೆ.

'ಪರ್ಯಾಯ ವ್ಯವಸ್ಥೆ ಕಲ್ಪಿಸದೆ, ದೀರ್ಘಕಾಲದ ಸಂಪ್ರದಾಯವನ್ನು ನಿಲ್ಲಿಸುವುದು ಸಾರ್ವಜನಿಕ ಹಿತಾಸಕ್ತಿ ಆಗುವುದಿಲ್ಲ. ಒಂದು ವೇಳೆ ಗಂಗಾರತಿಯನ್ನು ಹಠಾತ್ತನೆ ನಿಲ್ಲಿಸಿದ್ದೇ ಆದರೆ, ಯಾತ್ರಿಕರು ಮತ್ತು ಪ್ರವಾಸಿಗರಿಗೆ ತುಂಬಾ ಅನಾನುಕೂಲತೆ ಉಂಟಾಗುವ ಸಾಧ್ಯತೆ ಇದೆ' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಸ್ತುತ ಶ್ರೀ ಗಂಗಾ ಸಭಾದ ನೋಂದಣಿ ಅವಧಿ ಮುಗಿದಿದ್ದು, ಆರತಿಯನ್ನು ನಿರ್ವಹಿಸಲು ಶಾಶ್ವತ ಹಕ್ಕನ್ನು ಹೊಂದಿಲ್ಲ ಎಂದು ನ್ಯಾಯಾಲಯ ಗುರುತಿಸಿದ್ದರೂ, ಆಚರಣೆಯನ್ನು ತಾತ್ಕಾಲಿಕ ವ್ಯವಸ್ಥೆಯಾಗಿ ಮುಂದುವರಿಸಲು ಅವಕಾಶ ನೀಡುವುದು ಅಗತ್ಯವೆಂದು ಪರಿಗಣಿಸಿದೆ.

ಗಂಗಾರತಿ ನಡೆಸದಂತೆ ಹೊರಡಿಸಿದ್ದ ಮಹಾನಗರ ಪಾಲಿಕೆಯ ಆದೇಶವನ್ನು ತಡೆಹಿಡಿದಿದೆ. ಜತೆಗೆ, ಶ್ರೀ ಗಂಗಾ ಸಭಾ ಯಾವುದೇ ಪ್ರವೇಶ ಶುಲ್ಕವನ್ನು ವಿಧಿಸಬಾರದು ಅಥವಾ ಆರತಿಯಲ್ಲಿ ಭಾಗವಹಿಸಲು, ವೀಕ್ಷಿಸಲು ಬಯಸುವ ಭಕ್ತರಿಂದ ಹಣವನ್ನು ಸಂಗ್ರಹಿಸಬಾರದು ಎಂದು ತಾಕೀತು ಮಾಡಿರುವ ನ್ಯಾಯಾಲಯವು, ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿದೆ.

ಹೂವುಗಳು, ದೀಪಗಳು ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಸ್ಥಳೀಯ ಅಂಗಡಿಯವರಿಂದ ಯಾವುದೇ ಕಮಿಷನ್ ಅಥವಾ ಬಾಡಿಗೆಯನ್ನು ಗಂಗಾ ಸಭಾ ಪಡೆಯಬಾರದು ಎಂದು ನ್ಯಾಯಾಲಯವು ನಿರ್ದೇಶನ ನೀಡಿದೆ.

ಘಾಟ್‌ನಲ್ಲಿ ಸ್ವಚ್ಛತೆಯನ್ನು ಖಾತ್ರಿಪಡಿಸುವ ಜವಾಬ್ದಾರಿ ಸಂಪೂರ್ಣವಾಗಿ ಗಂಗಾ ಸಭಾದ ಮೇಲಿರುತ್ತದೆ. ಗಂಗಾರತಿ ಮುಗಿದ ಬಳಿಕ ನದಿ ಮಾಲಿನ್ಯವನ್ನು ತಡೆಗಟ್ಟಲು ಹೂವುಗಳು, ಕರ್ಪೂರ ಮತ್ತು ಎಣ್ಣೆಯಂತಹ ಸಾಮಗ್ರಿಗಳನ್ನು ಸರಿಯಾಗಿ ವಿಲೇವಾರಿ ಮಾಡುವುದು ಕಡ್ಡಾಯ ಎಂದೂ ನ್ಯಾಯಾಲಯ ಸೂಚಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries