ನ್ಯೂಯಾರ್ಕ್/ವಾಷಿಂಗ್ಟನ್: ' ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ತಮಗೆ ದೊರಕಿದ್ದ ನೊಬೆಲ್ ಶಾಂತಿ ಪುರಸ್ಕಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಮರ್ಪಿಸಿದ್ದಾರೆ. ಆದರೆ ನೊಬೆಲ್ ಪುರಸ್ಕಾರವನ್ನು ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಿಲ್ಲ' ಎಂದು ನಾರ್ವೆಯ ನೊಬೆಲ್ ಸಮಿತಿ ಹೇಳಿರುವುದಾಗಿ ನೊಬೆಲ್ ಶಾಂತಿ ಕೇಂದ್ರ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
'ನೊಬೆಲ್ ಪುರಸ್ಕಾರ ಒಮ್ಮೆ ಘೋಷಣೆಯಾದರೆ. ಬದಲಿ ಹೆಸರನ್ನು ಘೋಷಿಸಲು, ಹಂಚಿಕೊಳ್ಳಲು ಮತ್ತು ಹಸ್ತಾಂತರಿಸಲು ಸಾಧ್ಯವಿಲ್ಲ. ಈ ನಿರ್ಧಾರ ಸಾರ್ವಕಾಲಿಕವಾದದ್ದು. ಪದಕವನ್ನು ಹಸ್ತಾಂತರಿಸಬಹುದು ಆದರೆ, ನೊಬೆಲ್ ಪುರಸ್ಕೃತರೆಂಬ ಹೆಸರನ್ನು ಹಸ್ತಾಂತರಿಸಲು ಸಾಧ್ಯವಿಲ್ಲ' ಎಂದು ಸಮಿತಿ ಹೇಳಿದೆ.
ಪರಸ್ಪರ ಗೌರವದ ಪ್ರತೀಕವಿದು: ಟ್ರಂಪ್
ಪುರಸ್ಕಾರವನ್ನು ಹಸ್ತಾಂತರಿಸುವುದಾಗಿ ಈ ಹಿಂದೆಯೇ ಹೇಳಿದ್ದ ಮಾರಿಯಾ, ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡಿ ನೊಬೆಲ್ ಪದಕವನ್ನು ನೀಡಿದ್ದಾರೆ. ಈ ಬಗ್ಗೆ 'ಟ್ರುತ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, 'ಮಾರಿಯಾ ಒಬ್ಬ ಅದ್ಭುತ ಮಹಿಳೆ. ನಾನು ಮಾಡಿರುವ ಕೆಲಸವನ್ನು ಗುರುತಿಸಿ ಮಾರಿಯಾ ಅವರು ನೊಬೆಲ್ ಶಾಂತಿ ಪುರಸ್ಕಾರವನ್ನು ನನಗೆ ನೀಡಿದ್ದಾರೆ. ಇದು ಪರಸ್ಪರ ಗೌರವದ ಪ್ರತೀಕವಾಗಿದೆ' ಎಂದು ಹೇಳಿದ್ದಾರೆ.
'ವೆನೆಜುವೆಲಾದ ಸ್ವಾತಂತ್ರ್ಯಕ್ಕಾಗಿ ಗಟ್ಟಿ ನಿರ್ಧಾರವನ್ನು ಕೈಗೊಂಡ ಟ್ರಂಪ್ ಅವರಿಗೆ ಅಲ್ಲಿನ ನಾಗರಿಕರ ಪರವಾಗಿ ನಾನು ಗೌರವ ಸಲ್ಲಿಸಿದ್ದೇನೆ. ಟ್ರಂಪ್ ಅವರ ಧೈರ್ಯವನ್ನು ವೆನೆಜುವೆಲಾದ ನಾಗರಿಕರು ಎಂದಿಗೂ ಮರೆಯುವುದಿಲ್ಲ' ಎಂದು ಮಾರಿಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

