ನವದೆಹಲಿ: ದಕ್ಷಿಣ ಆಫ್ರಿಕಾ ಆಯೋಜಿಸಿದ್ದ ಬಹುಪಕ್ಷೀಯ ನೌಕಾ ತಾಲೀಮಿನಲ್ಲಿ 'ಬ್ರಿಕ್ಸ್' ರಾಷ್ಟ್ರಗಳ ಸಾಂಸ್ಥಿಕ ಚಟುವಟಿಕೆ ಇಲ್ಲದಿರುವುದರಿಂದ ಅದರಲ್ಲಿ ಪಾಲ್ಗೊಂಡಿಲ್ಲ ಎಂದು ಭಾರತ ಶನಿವಾರ ತಿಳಿಸಿದೆ.
ಚೀನಾ, ರಷ್ಯಾ, ಇರಾನ್, ಈಜಿಪ್ಟ್, ಇಂಡೋನೇಷ್ಯಾ, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ) ಸೇರಿದಂತೆ ಹಲವು ರಾಷ್ಟ್ರಗಳ ನೌಕಾಪಡೆಗಳನ್ನು ಒಳಗೊಂಡು ದಕ್ಷಿಣ ಆಫ್ರಿಕಾ ಸಾಗರ ಪ್ರದೇಶದಲ್ಲಿ ತಾಲೀಮು ನಡೆಯಿತು.
'ಇದು ದಕ್ಷಿಣ ಆಫ್ರಿಕಾ ನೇತೃತ್ವದಲ್ಲಿ ನಡೆದ ತಾಲೀಮು. ಕೆಲ 'ಬ್ರಿಕ್ಸ್' ರಾಷ್ಟ್ರಗಳು ಇದರಲ್ಲಿ ಭಾಗಿಯಾಗಿವೆ. ಇದು 'ಬ್ರಿಕ್ಸ್'ನ ನಿಗದಿತ ಸಾಂಸ್ಥಿಕ ಚಟುವಟಿಕೆಯಲ್ಲ' ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ ಜೈಸ್ವಾಲ್ ಅವರು ಸ್ಪಷ್ಟನೆ ನೀಡಿದ್ದಾರೆ.
ಪ್ರಸ್ತುತ 'ಬ್ರಿಕ್ಸ್' ಅಧ್ಯಕ್ಷ ಸ್ಥಾನದಲ್ಲಿರುವ ಭಾರತ ಈ ಹಿಂದೆಯೂ ಇಂಥ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ ಎಂದು ಹೇಳಿದ್ದಾರೆ.
ಸಂಭವನೀಯ ಸೇನಾ ದಾಳಿಯ ಕಾರಣ ಇರಾನ್‌ನಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ನಡುವೆಯೂ ಈ ತಾಲೀಮು ನಡೆಸಲಾಗಿದೆ.

