ಮಧ್ಯಪ್ರದೇಶ: ಭಾರತದ ಏಳಿಗೆಗೆ ಹಣಕಾಸಿನ ತೊಂದರೆ ಇಲ್ಲ, ಆದರೆ ಹಳ್ಳಿಗಳಲ್ಲಿರುವ ಬಡವರು, ರೈತರನ್ನು ಪ್ರತಿನಿಧಿಸುವ ಬದ್ಧ ನಾಯಕತ್ವದ ಕೊರತೆಯಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯ ಪಟ್ಟಿದ್ದಾರೆ.
ಮಧ್ಯಪ್ರದೇಶದ ವಿದಿಶಾದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.
ಹಣಕಾಸಿನ ಕೊರತೆಯಿಲ್ಲ, ನಾಯಕತ್ವದ ಕೊರತೆ
ಭಾರತದಲ್ಲಿರುವ ಸಂಪನ್ಮೂಲಗಳು ಮಹಾಭಾರತದಲ್ಲಿನ ಅಕ್ಷಯ ಪಾತ್ರಯಂತೆ, ತೆಗೆದಷ್ಟು ಇನ್ನು ಹೆಚ್ಚು ಹುಟ್ಟುತ್ತಲೇ ಇರುತ್ತದೆ. ನಮ್ಮ ದೇಶದಲ್ಲಿ ಹಣದ ಯಾವುದೇ ಕೊರತೆಯಿಲ್ಲ, ಆದರೆ ಹಳ್ಳಿಗಳಲ್ಲಿರುವ ಬಡವರು, ರೈತರ ಪರವಾಗಿ ಪ್ರಾಮಾಣಿಕವಾಗಿ ಕಲಸ ಮಾಡುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.ಘೋಷಣೆಯಾದ ಯೋಜನೆಗಳನ್ನು ಪೂರ್ಣಗೊಳಿಸಲು ಸಮರ್ಪಿತ ಕಾರ್ಮಿಕರ ಕೊರತೆಯಿಂದಾಗಿ ಎಷ್ಟೋ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಳ್ಳುತ್ತಿವೆ ಎಂದು ಅವರು ಪುನರುಚ್ಚರಿಸಿದರು.
4,400 ಕೋಟಿ ರೂ. ರಸ್ತೆ ಯೋಜನೆಗಳಿಗೆ ಚಾಲನೆ
ವಿದಿಶಾದಲ್ಲಿ 4,400 ಕೋಟಿ ರೂ. ಮೌಲ್ಯದ ಒಟ್ಟು ಎಂಟು ರಸ್ತೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಕಾರ್ಯಕ್ರಮವನ್ನು ನಡೆಸಲಾಯಿತು. ಮಧ್ಯಪ್ರದೇಶದ ಬೆಳವಣಿಗೆಗೆ ಸುಮಾರು 1 ಲಕ್ಷ ಕೋಟಿ ರೂ. ಮೌಲ್ಯದ ಹೊಸ ಯೋಜನೆಗಳನ್ನು ಅನುಮೋದಿಸುವುದಾಗಿ ಗಡ್ಕರಿ ಭರವಸೆ ನೀಡಿದ್ದು, ಈಗಾಗಲೇ ತಮ್ಮ ಸಚಿವಾಲಯದ ಅಡಿಯಲ್ಲಿ ರಾಜ್ಯದಲ್ಲಿ 2 ಲಕ್ಷ ಕೋಟಿ ರೂ. ಮೌಲ್ಯದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಡೆಯುತ್ತಿದೆ ಎಂದು ತಿಳಿಸಿದರು.
ರೈತರ ಪ್ರಾಣ ರಕ್ಷಣೆಗಾಗಿ ಜೀವನ ಅರ್ಪಣೆ
ಕೃಷಿ ಸಮಸ್ಯೆಗಳ ಬಗ್ಗೆ ಮಾತನಾಡಿದ ಗಡ್ಕರಿ, ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ನಡೆದ 10,000 ಕ್ಕೂ ಹೆಚ್ಚು ಆತ್ಮಹತ್ಯೆಗಳಿಂದ ಮನನೊಂದು, ರೈತರು ಇನ್ನುಮುಂದೆ ಆತ್ಮಹತ್ಯೆ ಮಾಡಿಕೊಳ್ಳದಂತೆ ನೋಡಿಕೊಳ್ಳಲು ನಾನು ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ ಎಂದು ಗಡ್ಕರಿ ಹೇಳಿದರು.
ರೈತ ಇನ್ನುಮುಂದೆ ಅನ್ನದಾತ (ಆಹಾರ ಪೂರೈಕೆದಾರರು) ನಿಂದ ಉರ್ಜಾದಾತ (ಇಂಧನ ಪೂರೈಕೆದಾರರು) ನಾಗಿ ಪರಿವರ್ತನೆ ಹೊಂದಬೇಕು. ಎಥೆನಾಲ್, ವಿಮಾನ ಇಂಧನ ಮತ್ತು ಬಿಟುಮೆನ್ ಉತ್ಪಾದನೆಯಲ್ಲಿ ರೈತರು ತೊಡಗಿಕೊಳ್ಳಬೇಕು ಎಂದರು. ನಾಗ್ಪುರದ ರೈತರು ಈಗಾಗಲೇ ಎಥೆನಾಲ್ ಉತ್ಪಾದಿಸುತ್ತಿದ್ದು, ಇದು ಭಾರತದ 22 ಲಕ್ಷ ಕೋಟಿ ಪಳೆಯುಳಿಕೆ ಇಂಧನ ಆಮದನ್ನು ಕಡಿಮೆ ಮಾಡುತ್ತದೆ. ಹೆಚ್ಚುತ್ತಿರುವ ಆದಾಯವು ಗ್ರಾಮೀಣ ವಲಸೆಯನ್ನು ತಡೆಯುತ್ತದೆ ಎಂದು ಅವರು ಹೇಳಿದರು.

