ಮಂಜೇಶ್ವರ: ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಪುತ್ತಿಗೆ ಡಿವಿಷನ್‍ನಿಂದ ವಿಜೇತರಾಗಿರುವ ಸೋಮಶೇಖರ ಜೆ.ಎಸ್. ಅವರು ಮತದಾರರಿಗೆ ಹಣ ಹಂಚಿರುವ ಬಗೆಗಿನ ಶಬ್ದ ಸಂದೇಶ ವೈರಲ್ ಆಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಅವರ ಆಯ್ಕೆಯನ್ನು ರದ್ದುಗೊಳಿಸಬೇಕು ಹಾಗೂ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರೈ ಅವರು ಕಾಸರಗೋಡು ಜಿಲ್ಲಾ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಆಡಿಯೋ ಸಂದೇಶದ ಪ್ರಕಾರ, ನಾಲ್ಕು ವಾರ್ಡ್‍ಗಳ ಮುಸ್ಲಿಂ ಲೀಗ್ ನೇತಾರರಿಗೆ ತಲಾ 50 ಸಾವಿರ ರೂ.ಗಳನ್ನು ಹಂಚಲಾಗಿರುವುದು ತಿಳಿದು ಬರುತ್ತಿದೆ. ಇದು ಸ್ವತಃ ಸೋಮಶೇಖರ್ ಅವರ ಸಹೋದರ ರಾಧಾಕೃಷ್ಣ ನಾಯಕ್ ಅವರ ಆಡಿಯೋ ಸಂದೇಶ ಎಂದು ಹೇಳಲಾಗುತ್ತಿದೆ. ಜಿ.ಪಂ.ಗೆ ಸ್ಪರ್ಧಿಸಿದ ಅಭ್ಯರ್ಥಿ ಕೇವಲ 1.5 ಲ.ರೂ. ಮಾತ್ರ ಖರ್ಚು ಮಾಡಲು ಕಾನೂನು ಪ್ರಕಾರ ಅವಕಾಶವಿದ್ದು, ಇಲ್ಲಿ 2 ಲ. ರೂ.ಗಳನ್ನು ನಾಲ್ಕು ವಾರ್ಡುಗಳಿಗೆ ಲಂಚ ರೂಪದಲ್ಲಿ ನೀಡಲಾಗಿರುವುದು ಆಡಿಯೋದಲ್ಲಿ ಸ್ಪಷ್ಟವಾಗುತ್ತಿದೆ. ಇದು ಕೇರಳ ಪಂಚಾಯಿತಿರಾಜ್ ಕಾಯ್ದೆ -1994 ಮತ್ತು ಪಂಚಾಯತ್ ರಾಜ್ ಚುನಾವಣೆ ನಿಯಮ - 1995ರ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು, ಜತೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೋಮಶೇಖರ್ ಗೆಲುವನ್ನು ರದ್ದು ಮಾಡಬೇಕು ಎಂದು ಮಣಿಕಂಠ ರೈ ಅವರು ಚುನಾವಣಾಧಿಕಾರಿಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.


