ಪೆರ್ಲ: ಜಿಲ್ಲಾ ಪಂಚಾಯಿತಿ ಪುತ್ತಿಗೆ ಡಿವಿಜನ್‍ನಲ್ಲಿ ಗೆಲುವು ಸಾಧಿಸಲು ಸೋಮಶೇಖರ ಜೆಎಸ್ ಅವರು ಚುನಾವಣಾ ನಿಯಮಗಳನ್ನು ಉಲ್ಲಂಘಿಸಿರುವುದು ಅವರದ್ದೇ ಪಕ್ಷದ ಮುಖಂಡರು ಸಮಾಜಿಕ ಜಾಲತಾಣಗಳಲ್ಲಿ ನಿಡಿರುವ ಶಬ್ದ ಸಂಭಾಷಣೆಯಿಂದ ಸ್ಪಷ್ಟವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯೆ, ಎನ್ಮಕಜೆ ಗ್ರಾಪಂ ಮಾಜಿ ಅಧ್ಯಕ್ಷೆ ರೂಪವಾಣಿ ಆರ್ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಣ್ಮಕಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಪ್ರಸಕ್ತ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿರುವ ಸೋಮಶೇಖರ ಜೆ.ಎಸ್ ಅವರು ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ನಡೆಸಿದ ಭ್ರಷ್ಟಾಚಾರದಿಂದ ಇಷ್ಟೊಂದು ಹಣ ಸಂಗ್ರಹಿಸಿ, ಲಂಚಕ್ಕಾಗಿ ನೀಡಿರುವುದು ಇದರಿಂದ ಸಾಬೀತಾಗಿದೆ. ಸೋಮಶೇಖರ್ ಅಧ್ಯಕ್ಷರಾಗಿದ್ದ ಸಂದರ್ಭ ಅವರ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಪತ್ರಿಕಾ ಹೇಳಿಕೆಗಳನ್ನು ನೀಡುವಾಗ, ಸೋಶಿಯಲ್ ಮೀಡಿಯಾಗಳಲ್ಲಿ ಪ್ರಶ್ನಿಸಿದಾಗ ಇದಕ್ಕೆ ಸೂಕ್ತ ಉತ್ತರ ನೀಡದೆ ನುಣುಚಿಕೊಂಡಿರುವುದು ಪ್ರಸಕ್ತ ವಿದ್ಯಮಾನಗಳಿಂದ ಸ್ಪಷ್ಟವಾಗುತ್ತಿದೆ. ಪ್ರಸಕ್ತ ಪಂಚಾಯಿತಿಯಲ್ಲಿ ಐಕ್ಯರಂಗ ಅಡ್ಡ ದಾರಿಯಿಂದ ಅಧಿಕಾರಕ್ಕೇರಿರುವುದು ಕಾಂಗ್ರೆಸ್ ಮುಖಮಡರ ಶಬ್ದ ಸಂದೇಶಗಳಿಂದ ವ್ಯಕ್ತವಾಗುತ್ತಿದೆ. ಹಣದ ಆಮಿಷವೊಡ್ಡಿ ಜಿಲ್ಲಾ ಪಂಚಾಯಿತಿ ಸ್ಥಾನದಲ್ಲಿ ಜಯಗಳಿಸಿರುವ ಸೋಮಶೇಖರ ಜೆ.ಎಸ್ ಅವರನ್ನು ತಕ್ಷಣದಿಂದ ಅನರ್ಹಗೊಳಿಸುವಂತೆ ರೂಪವಾಣಿ ಆರ್. ಭಟ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

