ನವದೆಹಲಿ: ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಲೋಕಸಭಾ ಸ್ಪೀಕರ್ ಸಂಸದೀಯ ಸಮಿತಿ ರಚಿಸಿದ ನಿರ್ಧಾರವನ್ನು ಮತ್ತು ಅದರ ಕಾನೂನಿನ ಮಾನ್ಯತೆಯನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಈ ಕುರಿತು ಅರ್ಜಿ ವಿಚಾರಣೆಯನ್ನು ಜನವರಿ 8ರಂದು ನಡೆಸಿದ್ದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಎಸ್.ಸಿ.ಶರ್ಮಾ ಅವರ ಪೀಠವು ಕಾಯ್ದಿರಿಸಿದ್ದ ತೀರ್ಪನ್ನು ಶುಕ್ರವಾರ ಪ್ರಕಟಿಸಿತು.
ರಾಷ್ಟ್ರಪತಿ ಅನುಪಸ್ಥಿತಿಯಲ್ಲಿ ಉಪ ರಾಷ್ಟ್ರಪತಿಯಾದವರು ರಾಷ್ಟ್ರಪತಿಯ ಕಾರ್ಯಗಳನ್ನು ನಿರ್ವಹಿಸಬಹುದು ಎಂದರೆ, ರಾಜ್ಯಸಭೆಯ ಸಭಾಪತಿಯ ಅನುಪಸ್ಥಿತಿಯಲ್ಲಿ ಉಪಸಭಾಪತಿ ಅವರ ಕಾರ್ಯಗಳನ್ನು ಏಕೆ ನಿರ್ವಹಿಸಬಾರದು ಎಂದು ಸುಪ್ರೀಂಕೋರ್ಟ್ ಹಿಂದಿನ ವಿಚಾರಣೆ ವೇಳೆ ಪ್ರಶ್ನಿಸಿತ್ತು.
ನ್ಯಾಯಮೂರ್ತಿಗಳ ವಿಚಾರಣಾ ಕಾಯ್ದೆ- 1968ರ ಪ್ರಕಾರ, ವಾಗ್ದಂಡನೆ ಕುರಿತ ನಿರ್ಣಯವನ್ನು ರಾಜ್ಯಸಭೆಯ ಉಪಸಭಾಪತಿಗೆ ತಿರಸ್ಕರಿಸುವ ಅಧಿಕಾರವಿಲ್ಲ, ಇಂಥ ನಿರ್ಣಯವನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭಾ ಸಭಾಪತಿಗೆ ಮಾತ್ರ ಇರುತ್ತದೆ ಎಂದು ನ್ಯಾಯಮೂರ್ತಿ ವರ್ಮಾ ಪರ ವಕೀಲರು ಮಾಡಿದ್ದ ವಾದಕ್ಕೆ ಪೀಠ ಸಮ್ಮತಿ ನೀಡಿರಲಿಲ್ಲ. ಇಂಥಹದ್ದಕ್ಕೆ ಕಾಯ್ದಯಡಿ ಯಾವುದೇ ನಿರ್ಬಂಧವಿಲ್ಲ ಎಂದು ಪೀಠ ಹೇಳಿತ್ತು.
ನವದೆಹಲಿಯಲ್ಲಿ ನ್ಯಾಯಮೂರ್ತಿ ವರ್ಮಾ ಅವರ ನಿವಾಸದಲ್ಲಿ ಮಾರ್ಚ್ 4ರಂದು ಸುಟ್ಟ ನೋಟುಗಳ ಕಂತೆ ಪತ್ತೆಯಾದ ಬೆನ್ನಲ್ಲೇ, ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು.

