ನವದೆಹಲಿ: ಮದ್ಯ ಸೇವನೆ ಶಂಕೆ ಹಿನ್ನೆಲೆ ಕೆನಡಾದ ವ್ಯಾಂಕೋವರ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಪೈಲಟ್ ಒಬ್ಬರನ್ನು ವಶಕ್ಕೆ ಪಡೆಲಾಗಿದೆ ಎಂದು ವರದಿಯಾಗಿದೆ.
2025ರ ಡಿಸೆಂಬರ್ 23ರಂದು ಈ ಘಟನೆ ನಡೆದಿದೆ. ಅವರು (ಪೈಲಟ್) ದೆಹಲಿಗೆ ಹೋಗುವ ವಿಮಾನವನ್ನು ಮುನ್ನಡೆಸಬೇಕಿತ್ತು. ಈ ಬಗ್ಗೆ 'ಎನ್‌ಡಿಟಿವಿ' ವರದಿ ಮಾಡಿದೆ
ಕೆಲ ವರದಿಗಳ ಪ್ರಕಾರ, ವ್ಯಾಂಕೋವರ್ ವಿಮಾನ ನಿಲ್ದಾಣದ ಡ್ಯೂಟಿ-ಫ್ರೀ ಅಂಗಡಿಯ ಸಿಬ್ಬಂದಿಯೊಬ್ಬರು ಪೈಲಟ್ ಮದ್ಯ ಸೇವಿಸುತ್ತಿರುವುದನ್ನು ನೋಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲ ವರದಿಗಳ ಪ್ರಕಾರ ಡ್ಯೂಟಿ-ಫ್ರೀ ಅಂಗಡಿಯ ಸಿಬ್ಬಂದಿ ಮದ್ಯ ಖರೀದಿಸುವಾಗ ಪೈಲಟ್ ಅವರಿಂದ ಮದ್ಯದ ವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ ಎನ್ನಲಾಗಿದೆ.
ತಕ್ಷಣ ಅವರು, ವಿಮಾನ ನಿಲ್ದಾಣದಲ್ಲಿನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಭದ್ರತಾ ಪಡೆಗಳು ಪೈಲಟ್‌ನನ್ನು ವಶಕ್ಕೆ ಪಡೆದಿದ್ದಾರೆ. ನಂತರ ಅವರನ್ನು ಬ್ರೀಥಲೈಜರ್ ಪರೀಕ್ಷೆಗೆ ಒಳಪಡಿಸಿದ್ದಾರೆ. ಆದರೆ ಅವರು ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ಕರ್ತವ್ಯಕ್ಕೆ ಪೈಲಟ್‌ನ ಫಿಟ್ನೆಸ್ ಬಗ್ಗೆ ಕೆನಡಾದ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದು, ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಸುರಕ್ಷತಾ ಮಾನದಂಡಗಳ ಅನುಸಾರ, ವಿಮಾನವನ್ನು ನಿರ್ವಹಿಸಲು ಪರ್ಯಾಯ ಪೈಲಟ್‌ನನ್ನು ನಿಯೋಜಿಸಲಾಯಿತು. ಆದಾಗ್ಯೂ ವಿಮಾನ ವಿಳಂಬದಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಕರಣದ ತನಿಖೆಗಾಗಿ ಸ್ಥಳೀಯ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ. ವಿಚಾರಣೆ ನಡೆಯುತ್ತಿರುವುದರಿಂದ ಸದ್ಯ ಪೈಲಟ್‌ನನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಪೈಲಟ್ ಯಾವುದೇ ನಿಯಮ ಉಲ್ಲಂಘಿಸಿರುವುದು ದೃಢಪಟ್ಟರೆ, ಏರ್ ಇಂಡಿಯಾ ಶೂನ್ಯ ಸಹಿಷ್ಣುತಾ ನೀತಿ ಅನುಸರಿಸಲಿದೆ ಎಂದೂ ಹೇಳಿದೆ.

