ನುಕ್: 'ನಾವು ಅಮೆರಿಕನ್ನರಾಗಲು ಬಯಸುವುದಿಲ್ಲ, ಡೇನ್ಸ್ (ಡೆನ್ಮಾರ್ಕ್) ಆಗಲೂ ಇಷ್ಟಪಡುವುದಿಲ್ಲ. ನಾವು ಗ್ರೀನ್‌ಲ್ಯಾಂಡ್‌ನವರಾಗಿಯೇ ಮುಂದುವರಿಯುತ್ತೇವೆ. ಗ್ರೀನ್‌ಲ್ಯಾಂಡ್‌ನ ಭವಿಷ್ಯವನ್ನು ಗ್ರೀನ್‌ಲ್ಯಾಂಡ್‌ನವರೇ ನಿರ್ಧರಿಸುತ್ತಾರೆ' ಎಂದು ಅಲ್ಲಿನ ಪ್ರಧಾನಿ ಜೆನ್ಸ್ ಫ್ರೆಡರಿಕ್ ನೀಲ್ಸೆನ್ ಮತ್ತು ನಾಲ್ಕು ಪಕ್ಷಗಳ ಮುಖಂಡರು ಜಂಟಿ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.
ಖನಿಜ ಸಂಪದ್ಭರಿತ ಆರ್ಕ್‌ಟಿಕ್ ದ್ವೀಪವಾದ 'ಗ್ರೀನ್‌ಲ್ಯಾಂಡ್' ಅನ್ನು ವಶಕ್ಕೆ ಪಡೆಯುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೆ ಹೇಳಿಕೆ ನೀಡಿರುವ ಬೆನ್ನಲ್ಲೇ, ಈ ಪ್ರಕಟಣೆ ಹೊರಬಿದ್ದಿದೆ.
'ಗ್ರೀನ್‌ಲ್ಯಾಂಡ್ ಬಗ್ಗೆ ಅಮೆರಿಕದ ತಿರಸ್ಕಾರ ಭಾವನೆಯೂ ಇದರೊಂದಿಗೆ ಕೊನೆಗೊಳ್ಳಲಿ' ಎಂದೂ ಈ ಮುಖಂಡರು ಆಶಿಸಿದ್ದಾರೆ.
'ಚೀನಾ, ರಷ್ಯಾಕ್ಕೆ ಬಿಟ್ಟು ಕೊಡುವುದಿಲ್ಲ'
'ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯುವ ಕುರಿತು ಶುಕ್ರವಾರ ಟ್ರಂಪ್ ಹೇಳಿಕೆ ನೀಡಿದ್ದರು. 'ಅವರಿಗೆ ಇಷ್ಟವಿರಲಿ, ಇಲ್ಲದಿರಲಿ, ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯಲು ಅಮೆರಿಕ ಒಡಂಬಡಿಕೆ ಮಾಡಿಕೊಳ್ಳಲಿದೆ. ಒಂದು ವೇಳೆ ಅಮೆರಿಕ ಗ್ರೀನ್‌ಲ್ಯಾಂಡ್ ಅನ್ನು ವಶಕ್ಕೆ ಪಡೆಯದಿದ್ದರೆ ರಷ್ಯಾ ಮತ್ತು ಚೀನಾ ಇದಕ್ಕಾಗಿ ಕಾಯುತ್ತಿವೆ. ಇದಕ್ಕೆ ಅಮೆರಿಕ ಅವಕಾಶ ಕೊಡುವುದಿಲ್ಲ' ಎಂದು ಟ್ರಂಪ್ ಹೇಳಿದ್ದಾರೆ.
'ಸರಳ ಮಾರ್ಗದ ಮೂಲಕ ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯಲು ಸಾಧ್ಯವಾಗದಿದ್ದರೆ ಆಗ ಬಲವಂತದ ಮಾರ್ಗ ಅನುಸರಿಸುತ್ತೇವೆ' ಎಂದಿರುವ ಟ್ರಂಪ್, ಈ ವಿಷಯದಲ್ಲಿ ಮಾಡಿಕೊಳ್ಳಲಿರುವ ಒಡಂಬಡಿಕೆ ಏನು ಎನ್ನುವುದನ್ನು ಬಹಿರಂಗಪಡಿಸಿಲ್ಲ. ಮಿಲಿಟರಿ ಶಕ್ತಿ ಬಳಸುವುದು ಸೇರಿದಂತೆ ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯಲು ಹಲವು ಆಯ್ಕೆಗಳನ್ನು ಪರಿಶೀಲಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

