ಇಂದೋರ್: ಕಲುಷಿತ ಕುಡಿಯುವ ನೀರಿನ ಸೇವನೆಯಿಂದಾಗಿ ಉಂಟಾದ ಅತಿಸಾರ ಕುರಿತ ಕೇಳಿದ ಪ್ರಶ್ನೆಗೆ ಸಿಟ್ಟಾದ ಮಧ್ಯ ಪ್ರದೇಶದ ಆರೋಗ್ಯ ಸಚಿವ ಕೈಲಾಶ್ ವಿಜಯವರ್ಗೀಯ ಅವರು ಖಾಸಗಿ ವಾಹಿನಿಯ ಪತ್ರಕರ್ತರೊಬ್ಬರ ಕುರಿತು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಬಳಿಕ ಕ್ಷಮೆಯನ್ನೂ ಯಾಚಿಸಿದ್ದಾರೆ.
ಅತಿಸಾರದಿಂದಾಗಿ ನಾಲ್ವರು ಮೃತಪಟ್ಟು, 212 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, 50 ಮಂದಿ ಮನೆಗೆ ಮರಳಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸಚಿವ ವಿಜಯವರ್ಗೀಯ ಅವರ ವಿಧಾನಸಭಾ ಕ್ಷೇತ್ರದಲ್ಲಿಯೇ ಅತಿಸಾರ ಪ್ರಕರಣಗಳು ವರದಿಯಾಗಿವೆ. ಸಚಿವರು ಬುಧವಾರ ರಾತ್ರಿ ಮಾಧ್ಯಮದವರೊಂದಿಗೆ ಮಾತುಕತೆ ನಡೆಸಿದ್ದರು. ಮೊದಮೊದಲು ಈ ಪ್ರಕರಣಗಳ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಶಾಂತವಾಗಿಯೇ ಉತ್ತರಿಸುತ್ತಿದ್ದರು.
'ಖಾಸಗಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಮನೆಗೆ ತೆರಳಿದ ರೋಗಿಗಳಿಗೆ ಹಣವನ್ನು ವಾಪಸು ಮಾಡಲಾಗಿಲ್ಲ. ಜೊತೆಗೆ, ನಿವಾಸಿಗಳಿಗೆ ಯಾಕಾಗಿ ವ್ಯವಸ್ಥಿತವಾದ, ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿಲ್ಲ' ಎಂದು ಪತ್ರಕರ್ತರೊಬ್ಬರು ಪ್ರಶ್ನೆ ಕೇಳುತ್ತಿದ್ದಂತೆಯೇ ಸಚಿವರು ತಾಳ್ಮೆ ಕಳೆದುಕೊಂಡು. 'ಇದನ್ನು ಇಲ್ಲಿಯೇ ಬಿಡಿ. ಅನಗತ್ಯ ಪ್ರಶ್ನೆಗಳನ್ನು ಕೇಳಬೇಡಿ' ಎನ್ನುತ್ತ ಆಕ್ಷೇಪಾರ್ಹ ಪದ ಬಳಕೆ ಮಾಡಿದರು.
ಪತ್ರಕರ್ತ ಹಾಗೂ ಸಚಿವರ ಮಧ್ಯದ ಮಾತುಕತೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಹರಿದಾಡಿತು. ಈ ವಿಡಿಯೊವನ್ನು ಹಂಚಿಕೊಂಡ ಮಧ್ಯ ಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜೀತು ಪಟ್ವಾರಿ, 'ಕಲುಷಿತ ಕುಡಿಯುವ ನೀರಿನ ಸೇವನೆಯಿಂದ ಸಾವಿನ ಸಂಖ್ಯೆಯು 8ರಿಂದ 10ಕ್ಕೆ ಏರಿಕೆಯಾಗಿದೆ. ವಿಜಯವರ್ಗೀಯ ಅವರಿಂದ ತಕ್ಷಣವೇ ರಾಜೀನಾಮೆ ಪಡೆದುಕೊಳ್ಳಬೇಕು' ಎಂದು ಆಗ್ರಹಿಸಿದರು.
ಕೈಲಾಶ್ ವಿಜಯವರ್ಗೀಯ ಮಧ್ಯಪ್ರದೇಶ ಆರೋಗ್ಯ ಸಚಿವಕಳೆದು ಎರಡು ದಿನಗಳಿಂದ ನಾನು ಮತ್ತು ನನ್ನ ತಂಡ ದಣಿವರಿಯದೆಯೇ ಕೆಲಸ ಮಾಡುತ್ತಿದ್ದೇವೆ. ಅತೀವ ದುಃಖದ ಮಾನಸಿಕ ಸ್ಥಿತಿಯಲ್ಲಿ ನಾನು ಮಾತನಾಡಿದ್ದೇನೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ.

