ಕಾಸರಗೋಡು: 'ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ'ಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ನಡೆಯಿತು. ಕೊಚ್ಚಿ ಡಿಸಿಸಿಡಿ ನಿರ್ದೇಶಕಿ ಡಾ.ಫೆಮಿನಾ ಪ್ರಗತಿ ಪರಿಶೀಲನೆಗೆ ನೇತೃತ್ವ ನೀಡಿದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಅಂಗವಾಗಿರುವ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ಜಿಲ್ಲಾ ಮುಖ್ಯಸ್ಥರು ಕೆಲಸಕಾರ್ಯಗಳ ಪ್ರಗತಿಯನ್ನು ಪ್ರಸ್ತುತಪಡಿಸಿದರು.
ಪಂಚಾಯಿತಿ, ಬ್ಲೋಕ್ ಮಟ್ಟದಲ್ಲಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದರ ಜತೆಗೆ ಬೆಳೆ ವೈವಿಧ್ಯೀಕರಣ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು, ಪಂಚಾಯಿತಿ ಮತ್ತು ಬ್ಲಾಕ್ ಮಟ್ಟದಲ್ಲಿ ಕೊಯ್ಲಿನ ನಂತರದ ಕೃಷ್ಯುತ್ಪನ್ನಗಳ ಶೇಖರಣಾ ಸೌಲಭ್ಯಗಳನ್ನು ಹೆಚ್ಚಿಸುವುದು, ನೀರಾವರಿ ಸೌಲಭ್ಯಗಳನ್ನು ಸುಧಾರಿಸುವುದು ಮತ್ತು ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಪಿಎಂ ಧನ್-ಧಾನ್ಯ ಕೃಷಿಯೋಜನೆಯನ್ವಯ ಅಭಿವೃದ್ಧಿಶೀಲ ಕೃಷಿ ಜಿಲ್ಲೆಗಳ ಅಭಿವೃದ್ಧಿಯು ದೀರ್ಘಾವಧಿಯ ಯೋಜನೆಯಾಗಿದ್ದು, ಹಿಂದುಳಿದ ಪ್ರದೇಶಗಳ ಕೃಷಿ ವಲಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು 100 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಕೇರಳದಲ್ಲಿ ಕಾಸರಗೋಡು, ಕಣ್ಣೂರು ಮತ್ತು ಕೋಯಿಕ್ಕೋಡ್ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಕೃಷಿ ಅಭಿವೃದ್ಧಿ ಮತ್ತು ರೈತ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೇರಿ ಅಭಿವೃದ್ಧಿ , ಸಹಕಾರಿ, ಜಲಸಂಪನ್ಮೂಲ ಇಲಾಖೆ, ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಇಲಾಖೆ, ಭೂ ದಾಖಲೆಗಳ ಇಲಾಖೆ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ , ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯಗಳ ಚಟುವಟಿಕೆಗಳು ಯೋಜನೆಯಲ್ಲಿ ಒಳಗೊಂಡಿದೆ ಎಂದು ಡಾ. ಫೆಮಿನಾ ವಿವರಿಸಿದರು.
ಜಿಲ್ಲಾ ಯೋಜನಾಧಿಕಾರಿ ಟಿ. ರಾಜೇಶ್, ಪ್ರಧಾನ ಕೃಷಿ ಅಧಿಕಾರಿ ಕೆ. ರಾಘವೇಂದ್ರ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಎನ್.ಕೆ. ಸಂತೋಷ್, ಹೈನುಗಾರಿಕೆ ಸಹಾಯಕ ನಿರ್ದೇಶಕ ಕೆ. ಉಷಾದೇವಿ, ಮೀನುಗಾರಿಕೆ ಡಿಡಿ ಕೆ.ಎ. ಲಬೀಬ್, ಆತ್ಮ ಪಿ.ಡಿ ಕೆ. ಅನಂತ, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್, ಜಲ ನಿರ್ವಹಣ ಪ್ರಭಾರ ಡಿಡಿಎ ಜಿ.ನಿಶಾ, ತೋಟಗಾರಿಕಾ ಪ್ರಭಾರ ಡಿಡಿಎ ಟಿ.ವಿನೋದ್‍ಕುಮಾರ್, ಎನ್‍ಡಬ್ಲ್ಯೂಡಿಪಿ ಇನ್‍ಚಾರ್ಜ್ ಡಿ.ಎಲ್. ಸುಮಾ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಸ್. ತಿಪ್ಪೇಶ್, ಎಎಇ (ಕೃಷಿ) ಎನ್. ಸುಹಾಸ್, ಕೆವಿಕೆ ಎಸ್‍ಎಂಎಸ್ ಡಾ. ಬೆಂಜಮಿನ್, ಕೌಶಲ್ಯ ಸಂಯೋಜಕ ಎಂ.ಜಿ. ನಿದಿನ್ ಮೊದಲಾದವರು ಉಪಸ್ಥಿತರಿದ್ದರು.


