ನವದೆಹಲಿ: 'ಬೀದಿಗಳಿಂದ ಎಲ್ಲ ಬೀದಿನಾಯಿಗಳನ್ನೂ ತೆರವು ಮಾಡಿ ಎಂದು ನ್ಯಾಯಾಲಯವು ನಿರ್ದೇಶನ ನೀಡಿಲ್ಲ. ಪ್ರಾಣಿ ಜನನ ನಿಯಂತ್ರಣ (ಎಬಿಸಿ) ನಿಯಮಗಳ ಅನ್ವಯ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದ್ದೇವೆ' ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಬೀದಿನಾಯಿಗಳ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿತು.
ವಿವಿಧ ವಕೀಲರು ವಾದ ಮಂಡಿಸಿದರು.
'ತಮ್ಮ ಬಗ್ಗೆ ಭಯ ಇರುವ ವ್ಯಕ್ತಿಯನ್ನು ನಾಯಿಗಳು ಗುರುತಿಸುತ್ತವೆ. ಜೊತೆಗೆ, ಈ ಹಿಂದೆ ನಾಯಿಯಿಂದ ಕಡಿತಕ್ಕೆ ಒಳಗಾಗಿದ್ದರೂ ಅವುಗಳಿಗೆ ತಿಳಿಯುತ್ತವೆ. ಇಂಥ ವ್ಯಕ್ತಿಗಳ ಮೇಲೆಯೇ ನಾಯಿಗಳು ದಾಳಿ ನಡೆಸುತ್ತವೆ' ಎಂದು ಪೀಠ ಅಭಿಪ್ರಾಯಪಟ್ಟಿತು.
'ದೆಹಲಿಯಂಥ ನಗರಗಳಲ್ಲಿ ಇಲಿಗಳ ಕಾಟ ಇದೆ. ಇಲ್ಲಿ ಮಂಗಗಳ ಕಾಟವೂ ಇದೆ. ಹೀಗಿರುವಾಗಿ ಬೀದಿನಾಯಿಗಳನ್ನು ತೆರವು ಮಾಡಿಬಿಟ್ಟರೆ, ಕೆಟ್ಟ ಪರಿಮಾಣ ಎದುರಿಸಬೇಕಾಗಬಹುದು' ಎಂದು ಬೀದಿನಾಯಿಗಳ ಕುರಿತು ಪೀಠಕ್ಕೆ ಅಮ್ಯುಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಗೌರವ್ ಅಗರ್ವಾಲ್ ಹೇಳಿದರು.
ತಿಳಿಹಾಸ್ಯದ ಮೂಲಕ ಪ್ರತಿಕ್ರಿಯಿಸಿದ ಪೀಠ, 'ನಾಯಿಗಳು ಮತ್ತು ಬೆಕ್ಕುಗಳು ಶತ್ರುಗಳು. ಇಲಿಗಳನ್ನು ಬೆಕ್ಕುಗಳು ಕೊಲ್ಲುತ್ತವೆ. ಆ ಲೆಕ್ಕದಲ್ಲಿ ಬೆಕ್ಕುಗಳನ್ನೇ ನಾವು ಉಳಿಸಿಕೊಳ್ಳಬೇಕು' ಎಂದಿತು.

