ಪಣಜಿ: 'ಕಡಲ ಸಂಪನ್ಮೂಲವು ಯಾವುದೇ ಒಂದು ದೇಶದ ಸ್ವತ್ತಲ್ಲ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಇಲ್ಲಿ ತಿಳಿಸಿದರು.
ಗೋವಾ ಶಿಪ್ ಯಾರ್ಡ್ ದೇಶೀಯವಾಗಿ ನಿರ್ಮಿಸಿರುವ 'ಸಮುದ್ರ ಪ್ರತಾಪ್' ನೌಕೆಯನ್ನು ಭಾರತೀಯ ಕರಾವಳಿ ಪಡೆಗೆ ಸೇರ್ಪಡೆಗೊಳಿಸಿ ಮಾತನಾಡಿದ ಅವರು, 'ಕಡಲ ಸಂಪನ್ಮೂಲವು ಮಾನವೀಯತೆಯ ಹಂಚಿಕೆಯ ಪರಂಪರೆಯಾಗಿದೆ ಎಂಬುದನ್ನು ಭಾರತವು ನಂಬುತ್ತದೆ' ಎಂದರು.
'ಪರಂಪರೆಯನ್ನು ಹಂಚಿಕೊಂಡಾಗ, ಅದರ ಜವಾಬ್ದಾರಿಯನ್ನು ಸಹ ಹಂಚಿಕೊಳ್ಳಲಾಗುತ್ತದೆ. ಅದಕ್ಕಾಗಿಯೇ ಭಾರತವು ಇಂದು ಜವಾಬ್ದಾರಿಯುತ ಕಡಲ ಶಕ್ತಿಯಾಗಿ ಬೆಳೆದಿದೆ' ಎಂದು ತಿಳಿಸಿದರು.
ಭಾರತವು ದೇಶೀಯವಾಗಿ ನಿರ್ಮಿಸಿದ ಮೊದಲ ಮಾಲಿನ್ಯ ನಿಯಂತ್ರಣ ಹಡಗು 'ಸಮುದ್ರ ಪ್ರತಾಪ್' ಎಂದ ಸಿಂಗ್, ಕರಾವಳಿ ಪಡೆಯಲ್ಲಿನ ಅತ್ಯಂತ ದೊಡ್ಡ ನೌಕೆ ಇದಾಗಿದೆ ಎಂದರು.
'ಶೇ 60ಕ್ಕಿಂತ ಹೆಚ್ಚು ಸ್ಥಳೀಯ ವಸ್ತುಗಳನ್ನೇ ಬಳಸಿ ತಯಾರಿಸಿದ ನೌಕೆ ಇದಾಗಿದ್ದು, ಆತ್ಮನಿರ್ಭರ ಭಾರತದ ದಿಕ್ಕಿನಲ್ಲಿ ಇದು ಬಲವಾದ ಹೆಜ್ಜೆಯಾಗಿದೆ. 'ಮೇಕ್ ಇನ್ ಇಂಡಿಯಾ'ದ ನೈಜ ಅರ್ಥವು ಈ ರೀತಿಯ ಯೋಜನೆಗಳಲ್ಲಿ ಗೋಚರಿಸುತ್ತಿದೆ' ಎಂದು ಕೇಂದ್ರ ಸಚಿವರು ತಿಳಿಸಿದರು.
ಪೈಲಟ್, ವೀಕ್ಷಕ, ಏರ್ ಟ್ರಾಫಿಕ್ ಕಂಟ್ರೋಲರ್ ಮತ್ತು ಲಾಜಿಸ್ಟಿಕ್ಸ್ ಅಧಿಕಾರಿ ಸೇರಿದಂತೆ ಪ್ರಮುಖ ಜವಾಬ್ದಾರಿಯ ಹುದ್ದೆಗಳಿಗೆ ಮಹಿಳಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಮುಂಚೂಣಿ ಯೋಧರಾಗಿ ವನಿತೆಯರು ಕಾರ್ಯಾಚರಣೆಯಲ್ಲಿ ಭಾಗವಹಿಸುವಂತೆ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಹಲವರು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಾರಿಯರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ರಕ್ಷಣಾ ಇಲಾಖೆ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್, ಭಾರತೀಯ ಕರಾವಳಿ ಪಡೆಯ ಮಹಾನಿರ್ದೇಶಕ ಪರಮೇಶ್ ಶಿವಮಣಿ ಉಪಸ್ಥಿತರಿದ್ದರು.

ಕರಾವಳಿ ಪಡೆಗೆ 'ಸಮುದ್ರ ಪ್ರತಾಪ್' ನೌಕೆಯನ್ನು ಸೇರ್ಪಡೆಗೊಳಿಸುವ ಸಮಾರಂಭದಲ್ಲಿ ಭಾಗಿಯಾದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೌಕಾಪಡೆಯ ಮಹಿಳಾ ಅಧಿಕಾರಿಗೆ ಹಸ್ತಲಾಘವ ನೀಡಿದರು
ದೇಶೀಯವಾಗಿ ವಿನ್ಯಾಸಗೊಳಿಸಿ ನಿರ್ಮಿಸಿರುವ ಮಾಲಿನ್ಯ ನಿಯಂತ್ರಣ ನೌಕೆ 'ಸಮುದ್ರ ಪ್ರತಾಪ್'. 114.5 ಮೀಟರ್ ಉದ್ದವಿರುವ 4200 ಟನ್ ತೂಕದ ಈ ಹಡಗು ಗಂಟೆಗೆ 22 ನಾಟಿಕಲ್ ಮೈಲಿ ವೇಗದಲ್ಲಿ ಚಲಿಸಲಿದ್ದು 6 ಸಾವಿರ ನಾಟಿಕಲ್ ಮೈಲಿ ದೂರ ಚಲಿಸುವ ಸಾಮರ್ಥ್ಯ ಹೊಂದಿದೆ. ಕಡಲ ಮಾಲಿನ್ಯ ನಿಯಂತ್ರಣ ನಿಯಮಗಳು ಕಡಲ ಕಾನೂನು ಜಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಸೇರಿದಂತೆ ವಿಶೇಷ ಆರ್ಥಿಕ ವಲಯವನ್ನು (ಇಇಝೆಡ್) ರಕ್ಷಿಸುವಲ್ಲಿ ಈ ಹಡಗು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಡಿಐಜಿ ಅಶೋಕ್ ಕುಮಾರ್ ಭಾಮಾ ನೇತೃತ್ವದಲ್ಲಿ ಕೊಚ್ಚಿಯಲ್ಲಿ ನೆಲೆಗೊಳ್ಳಲಿರುವ ಈ ನೌಕೆಯಲ್ಲಿ 14 ಅಧಿಕಾರಿಗಳು 115 ಸಿಬ್ಬಂದಿ ಇದ್ದಾರೆ.

