ನವದೆಹಲಿ: ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲಾ - ಕಮಲ್ ಮೌಲಾ ಮಸೀದಿ ಸಂಕೀರ್ಣದಲ್ಲಿ ವಸಂತ ಪಂಚಮಿಯ ದಿನ(ಶುಕ್ರವಾರ) ಹಿಂದೂಗಳು ಪೂಜೆ, ಪ್ರಾರ್ಥನೆ ಸಲ್ಲಿಸಲು ಹಾಗೂ ಮುಸ್ಲಿಮರು ನಮಾಜ್ ಮಾಡಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.
ನಮಾಜ್ ಮಾಡಲು ಬರುವ ಮುಸ್ಲಿಂ ಸಮುದಾಯದವರ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಮಸೀದಿಗೆ ನಿರ್ದೇಶನ ನೀಡಿದೆ.
ಜನವರಿ 23ರಂದು ವಸಂತ ಪಂಚಮಿ ಪ್ರಯುಕ್ತ ಭೋಜಶಾಲಾ ಆವರಣದಲ್ಲಿ ಸರಸ್ವತಿ ಪೂಜೆ ಆಚರಿಸಲಾಗುತ್ತದೆ. ಹಾಗಾಗಿ, ಧಾರ್ಮಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಸಂಬಂಧ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಕೋರ್ಟ್ ಮೆಟ್ಟಿಲೇರಿದ್ದರು.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ, ವಿಪುಲ್ ಎಂ. ಪಾಂಚೋಲಿ ಅವರಿದ್ದ ಪೀಠವು ಎರಡೂ ಕಡೆಯವರ ವಾದವನ್ನು ಆಲಿಸಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಆಡಳಿತಗಳ ಮಾರ್ಗಸೂಚಿಯಂತೆ ಪರಸ್ಪರ ಗೌರವ, ಸಹಕಾರವನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದೆ.
ಭೋಜಶಾಲಾ ಸಮೀಕ್ಷೆ: ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆಮಧ್ಯಪ್ರದೇಶ ಲೋಕಸಭಾ ಚುನಾವಣೆ | ಭೋಜಶಾಲಾ ವಿವಾದ: ಮತದಾರರ ಭಿನ್ನ ಅಭಿಪ್ರಾಯ
ಸ್ಥಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಸಂರಕ್ಷಣೆಯಲ್ಲಿರುವ 11ನೇ ಶತಮಾನದ ಸ್ಮಾರಕವಾಗಿರುವ ಭೋಜಶಾಲೆಯನ್ನು ಹಿಂದೂಗಳು ವಾಗ್ದೇವಿಯ (ಸರಸ್ವತಿ) ದೇವಾಲಯವೆಂದು ಪರಿಗಣಿಸುತ್ತಾರೆ. ಆದರೆ, ಮುಸ್ಲಿಂ ಸಮುದಾಯವರು ಈ ಸಂಕೀರ್ಣವನ್ನು ಕಮಲ್ ಮೌಲಾ ಮಸೀದಿ ಎಂದು ಕರೆಯುತ್ತಾರೆ.
2003ರಲ್ಲಿ ಎಎಸ್‌ಐ ನೀಡಿರುವ ಆದೇಶದ ಅನ್ವಯ ಭೋಜಶಾಲಾದಲ್ಲಿ ಪ್ರತಿ ಮಂಗಳವಾರ ಹಿಂದೂಗಳು ಪೂಜೆ ಮಾಡುತ್ತಾರೆ ಮತ್ತು ಪ್ರತಿ ಶುಕ್ರವಾರ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಾರೆ.

