ಚೆನ್ನೈ: ಕೆಟ್ಟ ನೆರೆಹೊರೆಯವರಿಂದ ತನ್ನ ನಾಗರಿಕರನ್ನು ರಕ್ಷಿಸುವ ಎಲ್ಲಾ ಹಕ್ಕು ಭಾರತಕ್ಕಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಶುಕ್ರವಾರ ಹೇಳಿದ್ದಾರೆ.
ಐಐಟಿ ಮದ್ರಾಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ಅವರು ಮಾತನಾಡಿದ್ದಾರೆ.
ಭಯೋತ್ಪಾದನೆಯನ್ನು ಸಲಹುವ ದೇಶವು, ಭಾರತದ ಬಳಿ ನೀರು ಕೊಡಿ ಎಂದು ಕೇಳಬಾರದು.
ನಮ್ಮ ಹಕ್ಕುಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ನಮಗೆ ಯಾವ ದೇಶವೂ ಕೂಡ ಉಪದೇಶ ನೀಡಬೇಕಾಗಿಲ್ಲ ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.
ಭಾರತವು ಒಳ್ಳೆಯ ನೆರೆಹೊರೆಯವರಿಗೆ ಒಳಿತನ್ನೇ ಬಯಸುತ್ತದೆ. ಆ ದೇಶಗಳಿಗೆ ಹೂಡಿಕೆ, ಸಹಾಯ ಮತ್ತು ಸಹಕಾರ ನೀಡುತ್ತದೆ. ನಮ್ಮ ಮಿತ್ರರಾಷ್ಟ್ರಗಳಿಗೆ ಕೋವಿಡ್ ಸಮಯದಲ್ಲಿ ವ್ಯಾಕ್ಸಿನ್ ನೀಡಿರುವುದು, ಉಕ್ರೇನ್ ಸಂಘರ್ಷದ ವೇಳೆ ಆಹಾರ ಮತ್ತು ಇಂಧನ ಪೂರೈಕೆ, ಶ್ರೀಲಂಕಾವು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಮಯದಲ್ಲಿ 4 ಬಿಲಿಯನ್ ಅಮೆರಿಕನ್ ಡಾಲರ್ ಸಹಾಯ ಮಾಡಿದ್ದೆವು ಎಂದು ಹೇಳಿದ್ದಾರೆ.
ಸಾಮಾನ್ಯ ಜನರು ರಾಜತಾಂತ್ರಿಕತೆಯನ್ನು ರಾಕೆಟ್ ಸೈನ್ಸ್ ಎಂದು ತಿಳಿದುಕೊಂಡಿದ್ದಾರೆ. ಆದರೆ ಅದು ಕೇವಲ ಸಾಮಾನ್ಯ ಜ್ಞಾನವಷ್ಟೇ. ನಿಮ್ಮ ಜೊತೆ ಚೆನ್ನಾಗಿರುವ, ನಿಮಗೆ ಹಾನಿ ಮಾಡದ ನೆರೆಹೊರೆಯವರೊಂದಿಗೆ ನೀವು ಚೆನ್ನಾಗಿಯೇ ಇರುತ್ತೀರಿ. ಆದರೆ, ನಿಮಗೆ ತೊಂದರೆ ಕೊಡುವ ನೆರೆಹೊರೆಯವರೊಂದಿಗೆ ಆ ಬಾಂಧವ್ಯ ಸಾಧ್ಯವಿಲ್ಲ. ಒಂದು ದೇಶದ ವಿದೇಶಾಂಗ ನೀತಿಗೂ ಕೂಡ ಇದು ಅನ್ವಯವಾಗುತ್ತದೆ ಎಂದಿದ್ದಾರೆ.
ಆಧುನಿಕ ಕಾಲದಲ್ಲೂ ಕೆಲವೇ ದೇಶಗಳು ಮಾತ್ರ ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡಿವೆ. ಅದರಲ್ಲಿ ಭಾರತವೂ ಒಂದು. ನಾವು ವಸುದೈವ ಕುಟುಂಬ ಎನ್ನುವ ವಾಕ್ಯದಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ.

