ಅಮರಾವತಿ: ಆಂಧ್ರಪ್ರದೇಶದಲ್ಲಿ ಬೆಂಗಳೂರು-ಕಡಪ-ವಿಜಯವಾಡ ಆರ್ಥಿಕ ಕಾರಿಡಾರ್ (ಎನ್‌ಎಚ್-544ಜಿ) ನಿರ್ಮಾಣದ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಬುಧವಾರ ಪ್ರಕಟಿಸಿದ್ದಾರೆ.
ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು 'ಎನ್‌ಎಚ್ 544 ಜಿ ಆರ್ಥಿಕ ಕಾರಿಡಾರ್‌ನಲ್ಲಿ 29.95 ಲೇನ್ ಕಿ.ಮೀ ಉದ್ದಕ್ಕೆ ನಿರಂತರವಾಗಿ 24 ಗಂಟೆಗಳ ಕಾಲ ಬಿಟುಮಿನಸ್ ಕಾಂಕ್ರೀಟ್ ಹಾಕುವ ಮೂಲಕ ಎನ್‌ಎಚ್‌ಎಐ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದೆ' ಎಂದು ಅವರು ತಿಳಿಸಿದ್ದಾರೆ.
'ಖಾಸಗಿ ಸಂಸ್ಥೆ ರಜಪತ್ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ ಈ ದಾಖಲೆಗೆ ಕಾರಣವಾಗಿದೆ. ಈ ಸಾಧನೆಯ ಕೀರ್ತಿ ಕೇಂದ್ರ ಸರ್ಕಾರದ ದೂರದೃಷ್ಟಿ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ನಾಯಕತ್ವಕ್ಕೆ ಸಲ್ಲುತ್ತದೆ' ಎಂದು ಅವರು ಹೇಳಿದ್ದಾರೆ.
ಆಂಧ್ರಪ್ರದೇಶದ ಆರ್ಥಿಕ ಕಾರಿಡಾರ್‌ನ ಎರಡು ಮತ್ತು ಮೂರನೇ ಪ್ಯಾಕೇಜ್‌ಗಳಲ್ಲಿ ಜನವರಿ 11ರೊಳಗೆ ಇನ್ನೂ ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ಕಾಮಗಾರಿ ನಿರ್ವಹಿಸುತ್ತಿರುವ ತಂಡಗಳಿಗೆ ತಂಡಗಳಿಗೆ ಶುಭ ಹಾರೈಸಿದ್ದಾರೆ.

