HEALTH TIPS

ರಾಸಾಯನಿಕ ಮುಕ್ತ ಫೇಸ್‌ ಮಾಸ್ಕ್‌ ಮನೆಯಲ್ಲೇ ತಯಾರಿಸಬೇಕೆ? ಇಲ್ಲಿದೆ ಟಿಪ್ಸ್‌

ನವದೆಹಲಿ: ತ್ವಚೆಯ ರಕ್ಷಣೆಯಲ್ಲಿ ಫೇಸ್‌ ಮಾಸ್ಕ್‌ ಅಥವಾ ಫೇಸ್‌ ಪ್ಯಾಕ್‌ಗಳ (Face Masks for Skin) ಪಾತ್ರ ಮಹತ್ವದ್ದು. ಅವುಗಳನ್ನು ಮನೆಯಲ್ಲೇ ನಮ್ಮ ಅಗತ್ಯಕ್ಕೆ ತಕ್ಕಂತೆ ಕಡಿಮೆ ಸಮಯದಲ್ಲಿ ಮಾಡಿ ಕೊಳ್ಳಬಹುದು ಎಂದರೆ ಅದಕ್ಕಿಂತ ಒಳ್ಳೆಯ ಆಯ್ಕೆ ಇನ್ನೊಂದಿಲ್ಲ.

ಪಾರ್ಲರ್‌ಗೆ ಹೋಗುವ ಖರ್ಚು, ಸಮಯ, ಓಡಾಟ ಯಾವೊಂದೂ ಇಲ್ಲದಂತೆ ನಾವೇ ಮಾಡಿಕೊಳ್ಳುವಂಥ ಸರಳ ಫೇಸ್‌ ಮಾಸ್ಕ್‌ಗಳ ಮಾಹಿತಿ ಇಲ್ಲಿದೆ. ನಮ್ಮ ತ್ವಚೆ ಎಂಥದ್ದು ಎನ್ನುವುದನ್ನು ಅರ್ಥ ಮಾಡಿಕೊಂಡರೆ, ಅದಕ್ಕೆ ಸೂಕ್ತವಾದ ಫೇಸ್‌ ಮಾಸ್ಕ್‌ಗಳನ್ನು ಮಾಡಿಕೊಳ್ಳುವುದು ಕಷ್ಟವಿಲ್ಲ. ಈ ಚಳಿಗಾಲದಲ್ಲಿಯೂ ಮುಖ ಕಾಂತಿಯುಕ್ತವಾಗಿರುವಂತೆ ನೋಡಿಕೊಳ್ಳಬಹುದು.

ಶುಷ್ಕ ತ್ವಚೆ: ಒಣ ಚರ್ಮ ಇರುವವರಿಗೆ ಚಳಿಗಾಲ ಎಂದರೆ ಮತ್ತೂ ದುರಿತ ಕಾಲ. ತ್ವಚೆಯ ತೇವವನ್ನು ಹೆಚ್ಚಿಸುವಂಥ ಮತ್ತು ಇರುವ ತೇವವನ್ನು ತೆಗೆಯದಂಥ ಫೇಸ್‌ಮಾಸ್ಕ್‌ ಇಂಥವರಿಗೆ ಬೇಕು. ಇದಕ್ಕಾಗಿ ಚೆನ್ನಾಗಿ ಕಳಿತ ಬಾಳೆಹಣ್ಣಿನ ಪಲ್ಪ್‌ ಒಂದು ದೊಡ್ಡ ಟೇಬಲ್‌ ಚಮಚ, ಅದರ ಅರ್ಧದಷ್ಟು ಜೇನುತುಪ್ಪ, ಒಂದು ದೊಡ್ಡ ಟೇಬಲ್‌ ಚಮಚ ಹಾಲಿನ ಕೆನೆ. ಇವೆಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿ, ಮುಖಕ್ಕೆ ಲೇಪಿಸಿ. 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಎಣ್ಣೆ ಚರ್ಮ: ತ್ವಚೆಯಿಂದ ಹೆಚ್ಚು ಎಣ್ಣೆ ಒಸರುತ್ತಿದ್ದರೆ, ಚರ್ಮದ ಮೇಲಿರುವ ರಂಧ್ರಗಳೆಲ್ಲ ಬಿಗಿದುಕೊಂಡಿರುತ್ತವೆ. ಇದರಿಂದಾಗಿ ಮೊಡವೆಗಳೂ ಗಂಟು ಬೀಳಬಹುದು. ಹಾಗಾಗಿ ಹೆಚ್ಚುವರಿ ಎಣ್ಣೆಯನ್ನು ಚರ್ಮದಿಂದ ತೆಗೆಯುವಂಥ ಫೇಸ್‌ಮಾಸ್ಕ್‌ಗಳು ಇಂಥವರಿಗೆ ಬೇಕು. ಒಂದು ಚಮಚ ಮುಲ್ತಾನಿ ಮಿಟ್ಟಿ, ಒಂದು ಚಮಚ ಗುಲಾಬಿ ಜಲ, ಒಂದೆರಡು ಹನಿ ನಿಂಬೆ ರಸಗಳನ್ನು ಪೇಸ್ಟ್‌ನಂತೆ ಮಿಶ್ರ ಮಾಡಿ ಮುಖಕ್ಕೆ ಲೇಪಿಸಿ, 15 ನಿಮಿಷಗಳ ನಂತರ ವಾತಾವರಣದ ಉಷ್ಣತೆಯಷ್ಟೇ ಬೆಚ್ಚಗಿರುವ ನೀರಿನಿಂದ ಮುಖ ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಮಾತ್ರವೇ ಮಾಡಿದರೆ ಸಾಕು, ಹೆಚ್ಚು ಬಾರಿ ಬೇಡ.

ಮೊಡವೆ ಮುಖ: ಇವೆಲ್ಲ ಸೂಕ್ಷ್ಮ ಚರ್ಮಗಳ ಸಾಲಿಗೆ ಸೇರುತ್ತವೆ. ಹಾಗಾಗಿ ಯಾವುದೇ ಕಠೋರವಾದ ಪ್ರಯೋಗಗಳು ಈ ಚರ್ಮದ ಮೇಲೆ ಬೇಡ. ಇದಕ್ಕಾಗಿ ಲೋಳೆಸರದ ಜೆಲ್‌ ಮತ್ತು ಚಿಟಿಕೆ ಅರಿಶಿನದಿಂದ ಪೇಸ್ಟ್‌ ತಯಾರಿಸಿ. ಈ ಫೇಸ್‌ ಮಾಸ್ಕ್‌ನಿಂದ ಮುಖದ ಮೇಲಿನ ಕೆಂಪಾದ ಗುಳ್ಳೆಗಳು, ಊದಿಕೊಂಡಂಥ ನೋವಿನ ಭಾಗವನ್ನು ಶಾಂತಗೊಳಿಸಬಹುದು. ಜತೆಗೆ ಅರಿಶಿನವೂ ನಂಜು ಕಡಿಮೆ ಮಾಡಲು ನೆರವಾಗುತ್ತದೆ. 15 ನಿಮಿಷಗಳ ಲೇಪದ ನಂತರ ಹಿತವಾದ ಬಿಸಿ ನೀರಿನಿಂದ ಮುಖವನ್ನು ತೊಳೆಯಿರಿ.

ಮಿಶ್ರ ತ್ವಚೆ: ಈ ರೀತಿಯ ಚರ್ಮದವರಿಗೆ ಹಣೆ, ಮೂಗು, ಗಲ್ಲದ ಭಾಗ ಎಣ್ಣೆ ಸೂಸುತ್ತಿದ್ದರೆ, ಕೆನ್ನೆಯ ಭಾಗ ಶುಷ್ಕವಾಗಿರುತ್ತದೆ. ಹಾಗಾಗಿ ಎಲ್ಲದಕ್ಕೂ ಆಗುವಂಥ ಮಾಸ್ಕ್‌ ಇವರಿಗೆ ಬೇಕು. ಇದಕ್ಕಾಗಿ ಒಂದು ಚಮಚದಷ್ಟು ಹುಳಿಯಿಲ್ಲದ ಮೊಸರು ಮತ್ತು ಅಷ್ಟೇ ಪ್ರಮಾಣದಲ್ಲಿ ಜೇನುತುಪ್ಪವನ್ನು ತೆಗೆದುಕೊಳ್ಳಿ. ಇವುಗಳನ್ನು ನಯವಾದ ಪೇಸ್ಟ್‌ನಂತೆ ಮಾಡಿ ಮುಖಕ್ಕೆ ಲೇಪಿಸಿ. 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನೂ ವಾರಕ್ಕೊಮ್ಮೆ ಮಾಡಿದರೆ ಸಾಕು.

ಕಾಂತಿಹೀನ ತ್ವಚೆ: ಎಲ್ಲಿಂದಲೋ ಪ್ರಯಾಣ ಮಾಡಿ ಬಂದಿದ್ದೀರಿ. ಮುಖವೆಲ್ಲ ಕಳೆಗುಂದಿದಂತೆ, ಒಣಗಿದಂತೆ ಕಾಣುತ್ತಿದೆ. ವಾತಾವರಣದ ದೂಳು, ಕೊಳೆ, ಒತ್ತಡ, ನಿದ್ದೆಯಿಲ್ಲದಿರುವುದು- ಇಂಥ ಹಲವು ಕಾರಣಗಳು ಇದರಬಹುದು ಚರ್ಮದ ಕಳೆಗುಂದುವುದಕ್ಕೆ. ನಿದ್ದೆಗೆಟ್ಟಿದ್ದರೆ ಅದನ್ನು ಸರಿ ಮಾಡಿಕೊಳ್ಳುವುದು, ಆಯಾಸವಾಗಿದ್ದರೆ ವಿಶ್ರಾಂತಿ ಪಡೆಯುವುದು- ಇಂಥ ಅಗತ್ಯ ಕೆಲಸಗಳಿಗೆ ಈ ಫೇಸ್‌ ಮಾಸ್ಕ್‌ ಪರ್ಯಾಯ ಎಂದು ಅರ್ಥವಲ್ಲ; ಆದರೆ ತುರ್ತು ಸಂದರ್ಭಗಳಲ್ಲಿ ಇಂಥ ಚುಟುಕು ಚಿಕಿತ್ಸೆಗಳು ನೆರವಾಗುವುದಂತೂ ನಿಜ. ಒಂದು ಚಮಚ ಕಡಲೆ ಹಿಟ್ಟು, ಅರ್ಧ ಚಮಚ ಹಾಲು, ಅರ್ಧ ಚಮಚ ಗುಲಾಬಿ ಜಲ, ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ ಪೇಸ್ಟ್‌ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ, 20ನಿಮಿಷಗಳವರೆಗೆ ಬಿಟ್ಟು, ನಂತರ ತೊಳೆಯಿರಿ. ಇದರಿಂದ ಮುಖದ ಕಾಂತಿಯನ್ನು ಮರಳಿ ಪಡೆಯಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries