Financial Express ವಿಶ್ಲೇಷಣೆಯ ಪ್ರಕಾರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ರ ಬಜೆಟ್‌ನಲ್ಲಿ ಸ್ಟಾರ್ಟ್‌ಅಪ್‌ಗಳಿಗಾಗಿ ಹೊಸ ನಿಧಿಯನ್ನು(ಫಂಡ್ ಆಫ್ ಫಂಡ್ಸ್) ಘೋಷಿಸಿದ್ದರು. ಇದು ವಿಸ್ತೃತ ವ್ಯಾಪ್ತಿಯನ್ನು ಹೊಂದಿದ್ದು, ಸರಕಾರದಿಂದ 10,000 ಕೋಟಿ ರೂ.ಗಳ ಹೊಸ ಕೊಡುಗೆಯನ್ನು ಒಳಗೊಂಡಿತ್ತು. ಆದಾಗ್ಯೂ ಕೆಲವು ಅಂಶಗಳ ಕುರಿತು ಅಂತಿಮ ಮಾರ್ಗಸೂಚಿಗಳು ಮತ್ತು ಸಂಪುಟದ ಅನುಮೋದನೆ ಬಾಕಿಯಿರುವುದರಿಂದ 10,000 ಕೋಟಿ ರೂ.ಗಳ ಹೊಸ ನಿಧಿಯು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಇದೇ ರೀತಿ ಕೃಷಿ ವಲಯದಲ್ಲಿ ಹತ್ತಿ ಉತ್ಪಾದಕತೆ ಅಭಿಯಾನ,ಕೆಸಿಸಿ ಮೂಲಕ ಹೆಚ್ಚಿನ ಸಾಲ ಮತ್ತು ಹೆಚ್ಚಿನ ಇಳುವರಿ ನೀಡುವ ಬೀಜಗಳ ರಾಷ್ಟ್ರೀಯ ಅಭಿಯಾನದಂತಹ ಉಪಕ್ರಮಗಳು ಇನ್ನೂ ಜಾರಿಗೊಂಡಿಲ್ಲ.
ಉದ್ಯೋಗ ಕ್ಷೇತ್ರದಲ್ಲಿ ಪ್ರೋತ್ಸಾಹ ಯೋಜನೆಯನ್ನು ಜು.2025ರಲ್ಲಿ ಆರಂಭಿಸಲಾಗಿತ್ತಾದರೂ ಯೋಜನೆಯಡಿ ಪ್ರಮುಖ ಉದ್ಯೋಗ ಸೃಷ್ಟಿಕರ್ತರಾಗಿರುವ ಮಧ್ಯಮ,ಸಣ್ಣ ಮತ್ತು ಕಿರು ಉದ್ಯಮಗಳ ಪಾಲ್ಗೊಳ್ಳುವಿಕೆ ಕಡಿಮೆಯಾಗಿರುವುದರಿಂದ ಅದಿನ್ನೂ ಪ್ರಾರಂಭಿಕ ಹಂತದಲ್ಲಿಯೇ ಇದೆ.
ಪಿಎಂ ಇಂಟರ್ನ್‌ಶಿಪ್ ಯೋಜನೆ ಕೂಡ ಅಕ್ಟೋಬರ್ 2024ರಲ್ಲಿ ಪ್ರಯೋಗಿಕವಾಗಿ ಆರಂಭಗೊಂಡಿದ್ದರೂ ಕೇವಲ ಶೇ.20 ಅಭ್ಯರ್ಥಿಗಳು ಮಾತ್ರ ಇಂಟರ್ನ್ ಶಿಪ್ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ವಸತಿ ಸಮಸ್ಯೆಗಳು ಮತ್ತು 12 ತಿಂಗಳುಗಳ ತರಬೇತಿಯ ದೀರ್ಘಾವಧಿಯಿಂದಾಗಿ ಈ ಪೈಕಿ ಶೇ.20ರಷ್ಟು ಅಭ್ಯರ್ಥಿಗಳು ನಡುವೆಯೇ ತೊರೆದಿದ್ದಾರೆ ಎಂದು ವರದಿಯು ತಿಳಿಸಿದೆ.

