ಚೆನ್ನೈ: ಕೇರಳ ಕುಂಭಮೇಳದ ಭಾಗವಾಗಿ ರಥಯಾತ್ರೆಗೆ ತಮಿಳುನಾಡು ಸರ್ಕಾರ ಅನುಮತಿ ನಿರಾಕರಿಸಿದೆ. ನಿನ್ನೆ (ಸೋಮವಾರ) ಬೆಳಿಗ್ಗೆ ತಮಿಳುನಾಡಿನ ಉದುಮಲ್‍ಪೇಟೆ ಬಳಿಯ ತಿರುಮೂರ್ತಿ ಬೆಟ್ಟಗಳಿಂದ ಪ್ರಾರಂಭವಾಗಬೇಕಿದ್ದ ರಥಯಾತ್ರೆಯನ್ನು ನಿಲ್ಲಿಸಲಾಯಿತು.
ತಿರುಮೂರ್ತಿ ಬೆಟ್ಟಗಳಲ್ಲಿರುವ ಭಾರತಪುಳ ನದಿಯ ಮೂಲದಿಂದ ರಥಯಾತ್ರೆ ಪ್ರಾರಂಭವಾಗಬೇಕಿತ್ತು. ಆದರೆ ಉದುಮಲ್‍ಪೇಟೆ ಪೋಲೀಸರು ಮೆರವಣಿಗೆಯನ್ನು ನಿಲ್ಲಿಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಚೆನ್ನೈನ ಉನ್ನತ ಸರ್ಕಾರಿ ಅಧಿಕಾರಿಗಳು ಅನುಮತಿ ನಿರಾಕರಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉದುಮಲ್‍ಪೇಟೆ ಪೋಲೀಸರು ಹೇಳುತ್ತಿದ್ದಾರೆ ಎಂದು ಸಂಘಟಕರು ಆರೋಪಿಸಿದ್ದಾರೆ. ಅನುಮತಿ ನಿರಾಕರಿಸಿದ ನಂತರ, ರಥಯಾತ್ರೆಯ ವಿಗ್ರಹವನ್ನು ಕಾರಿನಲ್ಲಿ ಕೇರಳ ಗಡಿಗೆ ಕೊಂಡೊಯ್ದು ಪಾಲಕ್ಕಾಡ್‍ನಲ್ಲಿ ರಥಯಾತ್ರೆಯನ್ನು ಪುನರಾರಂಭಿಸಲು ಸಂಘಟಕರು ನಿರ್ಧರಿಸಿದರು.
ಭಾರತಪುಳ ನದಿಯ ದಡದಲ್ಲಿರುವ ತಿರುನವಯದಲ್ಲಿ ನಡೆಯುವ ಉತ್ಸವಕ್ಕೆ ಸಂಬಂಧಿಸಿದಂತೆ ರಥಯಾತ್ರೆ ನಡೆಯುತ್ತಿದೆ. ಕೋಝಿಕ್ಕೋಡ್‍ನಲ್ಲಿರುವ ಭಾರತೀಯ ಧರ್ಮಪ್ರಚಾರ ಸಭಾದ ಆಚಾರ್ಯ ಡಾ. ಶ್ರೀನಾಥ್ ಕರಾಯತ್ ಅವರು ಯಾತ್ರೆಯ ನೇತೃತ್ವ ವಹಿಸಿದ್ದರು.

