HEALTH TIPS

ಗ್ರೀನ್‌ಲ್ಯಾಂಡ್‌ ವಶಪಡಿಸಿಕೊಂಡರೆ, ನ್ಯಾಟೊ ಅಂತ್ಯ: ಡೆನ್ಮಾರ್ಕ್‌ PM ಎಚ್ಚರಿಕೆ

ಕೋಪನ್‌ಹೇಗನ್‌: 'ಗ್ರೀನ್‌ಲ್ಯಾಂಡ್‌ ವಶಕ್ಕೆ ಪಡೆದರೆ, ನ್ಯಾಟೊ ಸೇನಾ ಒಕ್ಕೂಟದ ಅಂತ್ಯಕ್ಕೆ ಸಮವಾಗಿರುತ್ತದೆ' ಎಂದು ಡೆನ್ಮಾರ್ಕ್‌ ಪ್ರಧಾನಿ ಮೆಟ್ಟ ಫ್ರೆಡೆರಿಕ್‌ಸೆನ್‌ ಹೇಳಿಕೆ ನೀಡಿದ್ದಾರೆ.

ವೆನಿಜುವೆಲಾದ ಮೇಲೆ ವಾರಾಂತ್ಯದಲ್ಲಿ ಅಮೆರಿಕ ಸೇನಾ ಕಾರ್ಯಾಚರಣೆ ನಡೆಸಿದ ಬಳಿಕ ಖನಿಜ ಸಂಪದ್ಭರಿತ ಆರ್ಕ್‌ಟಿಕ್‌ ದ್ವೀಪ 'ಗ್ರೀನ್‌ಲ್ಯಾಂಡ್‌' ಅನ್ನು ವಶಕ್ಕೆ ಪಡೆಯುವ ಕುರಿತಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ, ಡೆನ್ಮಾರ್ಕ್‌ ಈ ಪ್ರತಿಕ್ರಿಯೆ ನೀಡಿದೆ.

ವೆನಿಜುವೆಲಾದ ರಾಜಧಾನಿ ಕರಾಕಸ್‌ ಮೇಲೆ ಶನಿವಾರ ಭಾರಿ ಪ್ರಮಾಣದಲ್ಲಿ ವಾಯುದಾಳಿ ನಡೆಸಿ, ಅಧ್ಯಕ್ಷ ನಿಕೊಲಸ್‌ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್‌ ಅವರನ್ನು ಅಮೆರಿಕ ಸೇನೆಯು ಸೆರೆ ಹಿಡಿದಿದ್ದ ಬೆಳವಣಿಗೆ ಇಡೀ ಜಗತ್ತಿನಲ್ಲಿ ಅಚ್ಚರಿ ಮೂಡಿಸಿತ್ತು. ಇದರಿಂದ ಡೆನ್ಮಾರ್ಕ್‌ ಹಾಗೂ ಗ್ರೀನ್‌ಲ್ಯಾಂಡ್‌ನಲ್ಲಿ ಕೂಡ ಕಳವಳ ಸೃಷ್ಟಿಯಾಗಿದೆ. ಡೆನ್ಮಾರ್ಕ್‌ನ ರಾಜ್ಯಾಡಳಿತಕ್ಕೆ ಒಳಪಟ್ಟ ಗ್ರೀನ್‌ಲ್ಯಾಂಡ್‌ ಅರೆ ಸ್ವಾಯತ್ತ ಪ್ರದೇಶವಾಗಿದ್ದು, ನ್ಯಾಟೊದ ಭಾಗವಾಗಿದೆ.

ಫ್ರೆಡೆರಿಕ್‌ಸೆನ್‌ ಹಾಗೂ ಗ್ರೀನ್‌ಲ್ಯಾಂಡ್‌ನ ಪ್ರಧಾನಿ ಜೆನ್ಸ್‌ ಫ್ರೆಡೆರಿಕ್‌ ನೀಲ್‌ಸೆನ್‌ ಅವರು ಟ್ರಂಪ್‌ ಹೇಳಿಕೆಯನ್ನು ಖಂಡಿಸಿದ್ದು, ದುರಂತದ ಪರಿಣಾಮಗಳ ಕುರಿತಂತೆ ಎಚ್ಚರಿಕೆ ನೀಡಿದ್ದಾರೆ. ಯುರೋಪ್‌ ಒಕ್ಕೂಟದ ಹಲವು ದೇಶಗಳ ಮುಖ್ಯಸ್ಥರು ಎರಡೂ ದೇಶಗಳ ಜೊತೆ ನಿಲ್ಲುವ ಒಗ್ಗಟ್ಟು ವ್ಯಕ್ತಪಡಿಸಿದ್ದಾರೆ.

'ಅಮೆರಿಕವು ಮತ್ತೊಂದು ನ್ಯಾಟೊ ದೇಶದ ಮೇಲೆ ದಾಳಿ ನಡೆಸಲು ಮುಂದಾದರೆ, ಎಲ್ಲವೂ ಕೊನೆಯಾಗಲಿದೆ' ಎಂದು ಮಟ್ಟೆ ಫ್ರೆಡೆರಿಕ್‌ಸೆನ್‌ ಅವರು ಡ್ಯಾನಿಷ್‌ ಸುದ್ದಿವಾಹಿನಿ 'ಟಿವಿ-2'ಗೆ ಹೇಳಿಕೆ ನೀಡಿದ್ದಾರೆ.

20 ದಿನಗಳ ಗಡುವು-ಆತಂಕ ಹೆಚ್ಚಳ

'ಗ್ರೀನ್‌ಲ್ಯಾಂಡ್‌ ಅನ್ನು ಅಮೆರಿಕದ ನ್ಯಾಯಾಂಗ ವ್ಯಾಪ್ತಿಗೆ ತರಲಾಗುವುದು ಅಗತ್ಯಬಿದ್ದರೆ ಸೇನಾ ಕಾರ್ಯಾಚರಣೆಗೂ ಹಿಂಜರಿಯುವುದಿಲ್ಲ' ಎಂದು ಡೊನಾಲ್ಡ್‌ ಟ್ರಂಪ್‌ ಅವರು ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾದ ಬೆನ್ನಲ್ಲೇ ಹೇಳಿಕೆ ನೀಡಿದ್ದರು.

ವೆನಿಜುವೆಲಾ ಮೇಲಿನ ದಾಳಿಯ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು 'ಇನ್ನೂ 20 ದಿನಗಳಲ್ಲಿ ಮತ್ತೆ ಗ್ರೀನ್‌ಲ್ಯಾಂಡ್‌ ಬಗ್ಗೆ ಮಾತನಾಡುವೆ' ಎಂದು ತಿಳಿಸಿದ್ದರು. ಭವಿಷ್ಯದಲ್ಲಿ ಗ್ರೀನ್‌ಲ್ಯಾಂಡ್‌ ವಿಚಾರದಲ್ಲಿ ಅಮೆರಿಕವು ಮಧ್ಯಪ್ರವೇಶಿಸುವ ಕುರಿತು ಹೆಚ್ಚಿನ ಕಳವಳ ವ್ಯಕ್ತವಾಗಿದೆ. 'ಅವರು (ಟ್ರಂಪ್‌) ಗ್ರೀನ್‌ಲ್ಯಾಂಡ್‌ ಬಯಸುತ್ತಿರುವುದಾಗಿ ತಿಳಿಸಿದ್ದಾರೆ. ಈ ರೀತಿಯಾಗಿ ನಮಗೆ ಹಾಗೂ ಗ್ರೀನ್‌ಲ್ಯಾಂಡ್‌ಗೆ ಬೆದರಿಕೆ ಹಾಕುವುದನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಫ್ರೆಡೆರಿಕ್‌ಸೆನ್‌ ತಿಳಿಸಿದ್ದಾರೆ. ‌

ಇದರ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರೀನ್‌ಲ್ಯಾಂಡ್‌ನ ಪ್ರಧಾನಿ ಜೆನ್ಸ್‌ ಫ್ರೆಡೆರಿಕ್‌ ನೀಲ್‌ಸೆನ್‌ 'ಗ್ರೀನ್‌ಲ್ಯಾಂಡ್‌ ಅನ್ನು ವೆನಿಜುವೆಲಾ ಜೊತೆಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಮತದಾರರು ಶಾಂತಿ ಹಾಗೂ ಒಗ್ಗಟ್ಟಿನಿಂದ ಇರಬೇಕು' ಎಂದು ಈ ವೇಳೆ ಒತ್ತಾಯಿಸಿದ್ದಾರೆ.

'ರಾತ್ರೋರಾತ್ರಿ ದೇಶವನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂಬ ಸ್ಥಿತಿಯಲ್ಲಿ ನಾವು ಇಲ್ಲ. ಹೀಗಾಗಿಯೇ ನಾವು ಉತ್ತಮ ಸಹಕಾರವನ್ನು ಎದುರು ನೋಡುತ್ತಿದ್ದೇವೆ. ಅಮೆರಿಕವು ಸುಲಭವಾಗಿ ಗ್ರೀನ್‌ಲ್ಯಾಂಡ್‌ ವಶಕ್ಕೆ ಪಡೆಯುವಂತಹ ಸ್ಥಿತಿಯೂ ನಿರ್ಮಾಣವಾಗಿಲ್ಲ' ಎಂದು ಹೇಳಿದ್ದಾರೆ.

ಟ್ರಂಪ್‌ ಹೇಳಿಕೆ ತಳ್ಳಿಹಾಕಿದ ಯುರೋಪ್‌

ಬರ್ಲಿನ್‌: ಗ್ರೀನ್‌ಲ್ಯಾಂಡ್‌ ಅನ್ನು ಅಮೆರಿಕ ವಶಪಡಿಸಿಕೊಳ್ಳಲಿದೆ ಎಂಬ ಡೊನಾಲ್ಡ್‌ ಟ್ರಂಪ್‌ ಹೇಳಿಕೆಯನ್ನು ಯುರೋಪ್‌ನ ಹಲವು ಮುಖಂಡರು ತಳ್ಳಿಹಾಕಿದ್ದಾರೆ. ಖನಿಜ ಸಮೃದ್ಧವಾದ ಆರ್ಕ್‌ಟಿಕ್‌ ದ್ವೀಪರಾಷ್ಟ್ರವು ಅಲ್ಲಿನ ಜನರಿಗೆ ಸೇರಿದ್ದಾಗಿದೆ ಎಂದು ಇಲ್ಲಿನ ನಾಯಕರು ಜಂಟಿ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ. ಫ್ರಾನ್ಸ್‌ ಜರ್ಮನಿ ಇಟಲಿ ಪೋಲಂಡ್‌ ಸ್ಪೇನ್‌ ಹಾಗೂ ಯುನೈಟೆಡ್‌ ಕಿಂಗ್‌ಡಮ್‌ನ ಅಧ್ಯಕ್ಷರು ಡೆನ್ಮಾರ್ಕ್‌ ಹಾಗೂ ಗ್ರೀನ್‌ಲ್ಯಾಂಡ್‌ ಸಾರ್ವಭೌಮತೆಯನ್ನು ಎತ್ತಿಹಿಡಿಯುವ ವಾಗ್ದಾನ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries