ಭೂಪಾಲ್: 'ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್) ಅರೆ ಮಿಲಿಟರಿ ಸಂಘಟನೆಯಲ್ಲ. ಬಿಜೆಪಿಯನ್ನು ನೋಡಿಕೊಂಡು ಅರ್‌ಎಸ್‌ಎಸ್ ಅನ್ನು ಅರ್ಥಮಾಡಿಕೊಳ್ಳುವುದು ದೊಡ್ಡ ತಪ್ಪು' ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಶುಕ್ರವಾರ ಹೇಳಿದರು.
'ನಮ್ಮ ಸ್ವಯಂ ಸೇವಕರು ಸಮವಸ್ತ್ರ ಧರಿಸುತ್ತಾರೆ, ಮೆರವಣಿಗೆಗಳಲ್ಲಿ ಸಾಗುತ್ತಾರೆ ಮತ್ತು ಕೋಲು ಹಿಡಿದು ದೈಹಿಕ ವ್ಯಾಯಾಮ ಮಾಡುತ್ತಾರೆ.
ಹೀಗೆಂದಮಾತ್ರಕ್ಕೆ ಸಂಘವನ್ನು ಪ್ಯಾರಾ ಮಿಲಿಟರಿ ಸಂಘಟನೆ ಎಂದು ಭಾವಿಸಿದರೆ ತಪ್ಪಾಗುತ್ತದೆ. ಇದು ಒಂದು ವಿಶಿಷ್ಟ ಸಂಘಟನೆಯಾಗಿದ್ದು, ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ' ಎಂದು ಅವರು ತಿಳಿಸಿದರು.
'ಸಮಾಜವನ್ನು ಒಗ್ಗೂಡಿಸಲು ಮತ್ತು ಭಾರತವು ಮತ್ತೆ ವಿದೇಶಿ ಶಕ್ತಿಯ ಹಿಡತಕ್ಕೆ ಸಿಲುಕದಂತೆ ನೋಡಿಕೊಳ್ಳಲು ಆರ್‌ಎಸ್‌ಎಸ್ ಶ್ರಮಿಸುತ್ತಿದೆ' ಎಂದು ಅವರು ಇಲ್ಲಿ ಪ್ರಮುಖ ವ್ಯಕ್ತಿಗಳ ಸಭೆಯಲ್ಲಿ ಹೇಳಿದರು.
'ಬಿಜೆಪಿಯನ್ನು ನೋಡಿ ಸಂಘವನ್ನು ಅರ್ಥಮಾಡಿಕೊಳ್ಳಲು ಬಯಸಿದರೆ ಅದು ದೊಡ್ಡ ತಪ್ಪು ಮಾಡಿದಂತೆ. ಅದೇ ರೀತಿ ವಿದ್ಯಾ ಭಾರತಿಯನ್ನು (ಆರ್‌ಎಸ್‌ಎಸ್- ಸಂಯೋಜಿತ ಸಂಸ್ಥೆ) ನೋಡಿ ಸಂಘವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೂ ತಪ್ಪೇ ಆಗುತ್ತದೆ' ಎಂದರು.
'ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಪಡೆಯುವವರಿಗೆ ಮಾತ್ರ ಸಂಘದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ತಿಳಿದುಕೊಳ್ಳಬಯಸುವವರು ಸಂಘಕ್ಕೆ ಭೇಟಿ ನೀಡಬಹುದು' ಎಂದು ಅವರು ವಿವರಿಸಿದರು.
'ದೇಶವನ್ನು ಆಕ್ರಮಿಸಿದವರಲ್ಲಿ ಬ್ರಿಟಷರು ಮೊದಲಿಗರಲ್ಲ. ದೂರದ ಸ್ಥಳಗಳಿಂದ ಬಂದ ಬೆರಳೆಣಿಕೆಯಷ್ಟು ಜನರು ಪದೇ ಪದೇ ನಮ್ಮನ್ನು ಸೋಲಿಸಿದರು. ಅವರು ನಮ್ಮಂತೆ ಶ್ರೀಮಂತರಾಗಿರಲಿಲ್ಲ, ಸದ್ಗುಣಶೀಲರೂ ಆಗಿರಲಿಲ್ಲ. ಹೀಗೆ ಬಂದವರು ನಮ್ಮ ಮನೆಯಲ್ಲಿಯೇ ನಮ್ಮನ್ನು ಏಳು ಬಾರಿ ಸೋಲಿಸಿದರು. ಎಂಟನೇ ಆಕ್ರಮಣಕಾರರಾಗಿ ಬಂದವರೇ ಬ್ರಿಟಿಷರು. ಹಾಗಾದರೆ ಸ್ವಾತಂತ್ರ್ಯದ ಖಾತರಿ ಏನು? ಹೀಗೆ ಪದೇ ಪದೇ ಆಕ್ರಮಣ ಸಂಭವಿಸುವುದರ ಬಗ್ಗೆ ನಾವು ಯೋಚಿಸಬೇಕಲ್ಲವೇ' ಎಂದರು.
ಸಂಘದ ಆರ್ಥಿಕ ಸ್ಥಿತಿ ಈಗ ಸರಿಯಿದೆ. ಅದು ಹೊರಗಿನ ನಿಧಿ ಅಥವಾ ದೇಣಿಗೆಗಳನ್ನು ಅವಲಂಬಿಸಿಲ್ಲ ಎಂದು ಅವರು ಇದೇ ವೇಳೆ ಹೇಳಿದರು.

