ಸಾಗರ ದ್ವೀಪ/ಕೋಲ್ಕತ್ತ/ದೇವಧರ್: 'ಅಮಾನವೀಯ ರೀತಿಯಲ್ಲಿ ರಾಜ್ಯದಲ್ಲಿ ನಡೆಸಲಾಗುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಮಂಗಳವಾರ (ಜ.6) ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇನೆ' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
ಸೋಮವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, 'ಎಸ್‌ಐಆರ್ ಕುರಿತ ಭಯ, ಹಿಂಸೆ ಮತ್ತು ಪಟ್ಟಿಯಿಂದ ಹೆಸರು ಕೈಬಿಡುವ ಪ್ರಕ್ರಿಯೆ ಕಾರಣದಿಂದ ಹಲವರು ಪ್ರಾಣ ತೆತ್ತಿದ್ದಾರೆ ಮತ್ತು ಹಲವರು ಆಸ್ಪತ್ರೆಗೆ ಸೇರಿದ್ದಾರೆ' ಎಂದರು.
'ಅವಕಾಶ ನೀಡಿದರೆ, ನಾನೊಬ್ಬ ಸಾಮಾನ್ಯ ಪ್ರಜೆಯಾಗಿ ಈ ಅಮಾನವೀಯ ಪ್ರಕ್ರಿಯೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇನೆ. ನಾನೂ ಕೂಡ ತರಬೇತಿ ಹೊಂದಿದ ವಕೀಲೆಯೇ ಆಗಿದ್ದೇನೆ' ಎಂದು ಹೇಳಿದರು.
'ಸೂಕ್ತ ಕಾರಣಗಳನ್ನೇ ನೀಡದೆ ಜನರು ಹೆಸರುಗಳನ್ನು ಪಟ್ಟಿಯಿಂದ ನಿರಂಕುಶವಾಗಿ ಕಿತ್ತು ಹಾಕಲಾಗುತ್ತಿದೆ. ಸಾಮಾನ್ಯವಾಗಿ ಯಾವಾಗಲೂ ನಡೆಯುವ ಒಂದು ಆಡಳಿತಾತ್ಮಕವಾದ ಪ್ರಕ್ರಿಯೆಯನ್ನು ಭಯ ಹುಟ್ಟಿಸುವ ರೀತಿಯಲ್ಲಿ ಕೈಗೊಳ್ಳಲಾಗುತ್ತಿದೆ. ಅದೂ ವಿಧಾನಸಭೆ ಚುನಾವಣೆಗೂ ಮೊದಲು' ಎಂದು ಅಭಿಪ್ರಾಯಪಟ್ಟರು.
'ತಾವು ಮತದಾರರು ಎಂಬುದನ್ನು ಖಚಿತಪಡಿಸುವುದಕ್ಕಾಗಿ ರೋಗಿಗಳನ್ನು, ವೃದ್ಧರನ್ನು ಉದ್ದ ಉದ್ದದ ಸಾಲುಗಳಲ್ಲಿ ನಿಲ್ಲಿಸಲಾಗುತ್ತಿದೆ. ಬಿಜೆಪಿಯ ವೃದ್ಧ ಪೋಷಕರನ್ನು ಈ ರೀತಿ ನಿಲ್ಲಿಸಿದರೆ ಅವರಿಗೆ ಹೇಗೆ ಅನ್ನಿಸುತ್ತದೆ?' ಎಂದು ಪ್ರಶ್ನಿಸಿದರು.
- ಸುವೇಂದು ಅಧಿಕಾರಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾಜ್ಯದ ಜನರು ಎಸ್‌ಐಆರ್ ಅನ್ನು ಭರವಸೆ ಬೆಳಕು ಎಂಬಂತೆ ಕಾಣುತ್ತಿದ್ದಾರೆ. ಈ ಪ್ರಕ್ರಿಯೆಯು ಭಯವನ್ನು ಹುಟ್ಟಿಸಿದೆ ಎಂಬುದು ಟಿಎಂಸಿ ಸೃಷ್ಟಿಸಿದ ಸಂಕಥನ. ಎದೆಗುಂದದೆ ಪ್ರಕ್ರಿಯೆಯನ್ನು ಮುಂದುವರಿಸಿ. (ಎಸ್‌ಐಆರ್ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಮಮತಾ ಅವರು ಚುನಾವಣೆ ಆಯೋಗಕ್ಕೆ ಬರೆದ ಪತ್ರಕ್ಕೆ ನೀಡಿದ ಪ್ರತಿಕ್ರಿಯೆ)
ದಾಖಲೆ ಸಲ್ಲಿಸಿ: ನಟ ದೇವ್‌ಗೆ ನೋಟಿಸ್
ಎಸ್‌ಐಆರ್‌ಗೆ ಸಂಬಂಧಿಸಿ ಹೇಳಿಕೆಯನ್ನು ನೀಡಲು ಮತ್ತು ಕೆಲವು ದಾಖಲೆಗಳನ್ನು ಸಲ್ಲಿಸಲು ಬರುವಂತೆ ಟಿಎಂಸಿ ಸಂಸದ ಮತ್ತು ನಟ ದೀಪಕ್ ಅಧಿಕಾರಿ (ದೇವ್) ಸೇರಿ ಅವರ ಕುಟುಂಬದ ಮೂವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಆದರೆ ದಿನಾಂಕವನ್ನು ಆಯೋಗ ನಿಗದಿ ಮಾಡಿಲ್ಲ. ಈ ಕ್ರಮವನ್ನು ಟಿಎಂಸಿ ವಿರೋಧಿಸಿದ್ದು 'ಖ್ಯಾತ ನಟನಿಗೆ ನೋಟಿಸ್ ನೀಡಿರುವುದು ದೌರ್ಜನ್ಯ' ಎಂದು ಕರೆದಿದೆ.
ತಂದೆ ಅವರ ವೃತ್ತಿ ಕಾರಣದಿಂದ ದೀಪಕ್ ಅವರ ಕುಟುಂಬವು ಮುಂಬೈಗೆ ಸ್ಥಳಾಂತರಗೊಂಡಿತ್ತು. ಆದರೆ ಈಗ ಕುಟುಂಬವು ಕೋಲ್ಕತ್ತದಲ್ಲಿ ನೆಲಸಿದೆ. 'ಪೌರತ್ವವನ್ನು ಸಾಬೀತುಪಡಿಸಬೇಕು ಎಂಬುದಾಗಿ ನಟನಿಗೆ ನೋಟಿಸ್ ನೀಡಲಾಗಿದೆ' ಎಂದು ರಾಜ್ಯದ ಚುನಾವಣಾ ಆಯೋಗದ ಕಚೇರಿ ಮೂಲಗಳು ತಿಳಿಸಿವೆ.
ಜಾರ್ಖಂಡ್‌ಗೆ ಸಿಇಸಿ 2 ದಿನಗಳ ಪ್ರವಾಸ
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಎರಡು ದಿನಗಳ ಭೇಟಿಗಾಗಿ ಸೋಮವಾರ ಜಾರ್ಖಂಡ್ ತಲುಪಿಸಿದರು. ಈ ವೇಳೆ ಜ್ಞಾನೇಶ್ ಕುಮಾರ್ ಅವರು ದೇವಧರ್‌ನಲ್ಲಿ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ (ಬಿಎಲ್‌ಒ) ಸಭೆ ನಡೆಸಿ ವಿವಿಧ ದೇವಾಲಯಗಳಿಗೂ ಭೇಟಿ ನೀಡಿದರು.
ಸಭೆಯಲ್ಲಿ ಮಾತನಾಡಿ 'ಉತ್ತಮ ಪ್ರಜಾಪ್ರಭುತ್ವಕ್ಕೆ ಮತದಾರರ ಪಟ್ಟಿಯನ್ನು ಸ್ವಚ್ಛ ಮಾಡುವುದು ಅಡಿಪಾಯವಿದ್ದಂತೆ. ಅಂತೆಯೇ ಇಂಥ ಪಟ್ಟಿಯನ್ನು ಸಿದ್ಧಪಡಿಸುವ ಬಿಎಲ್‌ಒಗಳು ಸ್ವಚ್ಛ ಮತದಾರರ ಪಟ್ಟಿಗೆ ಅಡಿಪಾಯವಿದ್ದಂತೆ. ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವಾಗ ಹಿಂಜರಿಕೆಯಾಗಬಾರದು ಎನ್ನುವ ದೃಷ್ಟಿಯಿಂದ ಬಿಎಲ್‌ಒಗಳಿಗೆ ಗುರುತಿನ ಚೀಟಿ ನೀಡಲಾಗಿದೆ' ಎಂದು ಜ್ಞಾನೇಶ್ ಕುಮಾರ್ ಅಭಿಪ್ರಾಯಪಟ್ಟರು.
ಬಾಸುಕೀನಾಥ್ ದೇವಸ್ಥಾನ ಮತ್ತು ಬಾಬಾ ವೈದ್ಯನಾಥ್ ದೇವಾಲಯಕ್ಕೆ ಜ್ಞಾನೇಶ್ ಕುಮಾರ್ ಭೇಟಿ ನೀಡಿದರು. 'ದೇಶದ ಹಾಗೂ ಜಾರ್ಖಂಡ್‌ನ ಶಾಂತಿ ಶ್ರೇಯೋಭಿವೃದ್ಧಿಗೆ ಶಿವನಲ್ಲಿ ಪ್ರಾರ್ಥಿಸಿದೆ' ಎಂದು ಅವರು ಹೇಳಿದರು.

