ಕ್ಯಾರಕಾಸ್: ಕ್ಯಾರಕಾಸ್ ಹಾಗೂ ಅದರ ಸುತ್ತಮುತ್ತಲಿನ ನಗರಗಳ ಮೇಲೆ ಅಮೆರಿಕ ವಾಯು ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಅಲ್ಲಿರುವ ಭಾರತೀಯರು ತೀವ್ರ ಆತಂಕದ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದಾರೆ ಎಂದು India Today ವರದಿ ಮಾಡಿದೆ.
ಕ್ಯಾರಕಾಸ್ ಮತ್ತು ಅಕ್ಕಪಕ್ಕದ ಪ್ರದೇಶಗಳ ಮೇಲೆ ಅಮೆರಿಕ ವಾಯುದಾಳಿ ನಡೆಸಿದ್ದು, ವೆನೆಝುವೆಲಾದ ಅಧ್ಯಕ್ಷ ನಿಕೊಲಾಸ್ ಮಡುರೊ ಅವರನ್ನು ವಶಕ್ಕೆ ಪಡೆದು ನ್ಯೂಯಾರ್ಕ್‌ಗೆ ಕರೆದೊಯ್ದಿದೆ.
ಈ ದಾಳಿಯಿಂದ ಕ್ಯಾರಕಾಸ್‌ನ ಪ್ರಮುಖ ಮೂಲಸೌಕರ್ಯಗಳು ಹಾಗೂ ವಿದ್ಯುತ್ ಗ್ರಿಡ್‌ಗಳಿಗೆ ಗಂಭೀರ ಸ್ವರೂಪದ ಹಾನಿಯಾಗಿದೆ. ಪರಿಣಾಮವಾಗಿ ವೆನೆಝುವೆಲಾ ರಾಜಧಾನಿಯ ಬಹುತೇಕ ಭಾಗಗಳು ಸಂಪೂರ್ಣ ಕತ್ತಲಲ್ಲಿ ಮುಳುಗಿವೆ.
ಸಂವಹನ ಜಾಲಗಳು ತೀವ್ರ ವ್ಯತ್ಯಯಕ್ಕೆ ಒಳಗಾಗಿದ್ದು, ಬೀದಿಗಳು ನಿರ್ಜನವಾಗಿವೆ. ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಸಾರ್ವಜನಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ದೇಶದ ಮುಖ್ಯಸ್ಥನಿಲ್ಲದ ಸ್ಥಿತಿಯಲ್ಲಿ ವೆನೆಝುವೆಲಾ ಅತಂತ್ರ ಪರಿಸ್ಥಿತಿಗೆ ತಲುಪಿದೆ.
ಲ್ಯಾಟಿನ್ ಅಮೆರಿಕದ ಈ ದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳಿಗೆ ಸಂಭವಿಸಿರುವ ಹಾನಿಯ ಕುರಿತು, ಕ್ಯಾರಕಾಸ್‌ನಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಸದಸ್ಯರಾದ ಸುನೀಲ್ ಮಲ್ಹೋತ್ರಾ ವಿವರಿಸಿದ್ದಾರೆ. ಅಮೆರಿಕದ ವಾಯು ದಾಳಿಯ ಪರಿಣಾಮವಾಗಿ ಆಹಾರಕ್ಕಾಗಿ ದೊಡ್ಡ ಪ್ರಮಾಣದ ಸರತಿ ಸಾಲುಗಳು ನಿರ್ಮಾಣವಾಗಿದ್ದು, ಜನರಲ್ಲಿ ಭಯ ಮತ್ತು ಅನಿಶ್ಚಿತತೆಯ ವಾತಾವರಣ ಮನೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
"ಇಲ್ಲಿ ಎಲ್ಲೆಡೆ ಸಂಪೂರ್ಣ ವಿನಾಶ ಸಂಭವಿಸಿಲ್ಲ. ಕ್ಯಾರಕಾಸ್‌ನಲ್ಲಿರುವ ವಾಯು ನಿಲ್ದಾಣದ ಮೇಲೆ ದಾಳಿ ನಡೆದಿದೆ. ಅಲ್ಲದೆ ನಗರದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ದೇಶದ ಅತ್ಯಂತ ಬೃಹತ್ ವಾಯು ನೆಲೆಯ ಮೇಲೂ ದಾಳಿ ನಡೆಸಲಾಗಿದೆ. ಪ್ಯೂರ್ಟೊ ತಿಯುನಾ ಪ್ರದೇಶದಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಅಲ್ಲಿಯೇ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ," ಎಂದು ಅವರು ತಿಳಿಸಿದ್ದಾರೆ.
ಈ ದಾಳಿಗಳ ಬೆನ್ನಲ್ಲೇ ಪ್ರಮುಖ ಸಂಸ್ಥೆಗಳು ಹಾಗೂ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಸಾರ್ವಜನಿಕ ಸಾರಿಗೆ ಸೇವೆಗಳನ್ನು ಅಮಾನತುಗೊಳಿಸಲಾಗಿದೆ. ಇದರಿಂದ ಇಡೀ ನಗರ ಸ್ತಬ್ಧ ಸ್ಥಿತಿಗೆ ತಲುಪಿದೆ. ಜನರು ಮನೆಗಳೊಳಗೇ ಉಳಿಯುವಂತಾಗಿದ್ದು, ಎಲ್ಲೆಡೆಯೂ ಅನಿಶ್ಚಿತತೆ ಆವರಿಸಿದೆ.ಹಾಗೂ ಅನಿಶ್ಚಿತತೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

