ದಾವೋಸ್: ಸ್ವಿಟ್ಜರ್‌ಲೆಂಡ್‌ನ ದಾವೋಸ್‌ನಲ್ಲಿ ಸೋಮವಾರದಿಂದ ಐದು ದಿನಗಳ ಕಾಲ ವಿಶ್ವ ಆರ್ಥಿಕ ವೇದಿಕೆಯ (ಡಬ್ಲುಇಎಫ್) ವಾರ್ಷಿಕ ಸಭೆ ನಡೆಯಲಿದ್ದು, ಜಾಗತಿಕ ಗಣ್ಯರೊಂದಿಗೆ ಚರ್ಚಿಸಲು ಭಾರತವು ಪ್ರಬಲ ಪ್ರಾತಿನಿಧ್ಯದ ಜತೆ ಸಜ್ಜಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿವಿಧ ದೇಶಗಳ ಸರ್ಕಾರಗಳ ಪ್ರತಿನಿಧಿಗಳು, ಶೈಕ್ಷಣಿಕ, ಬಹುಪಕ್ಷೀಯ ಸಂಸ್ಥೆಗಳ, ನಾಗರಿಕ ಸಮಾಜ ಮತ್ತು ಕಾರ್ಮಿಕ ಸಂಘಗಳ ಪ್ರತಿನಿಧಿಗಳು ಸೇರಿದಂತೆ 3000ಕ್ಕೂ ಹೆಚ್ಚು ಗಣ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಐವರು ಸಂಪುಟ ಸದಸ್ಯರೊಂದಿಗೆ ಟ್ರಂಪ್ ಹಾಜರಾಗಲಿರುವುದು ವಿಶೇಷ.
ಜಿ-7 ರಾಷ್ಟ್ರಗಳ ಪೈಕಿ ಆರು ದೇಶಗಳ ಉನ್ನತ ನಾಯಕರು ಸೇರಿದಂತೆ 64 ದೇಶಗಳ ಅಥವಾ ಸರ್ಕಾರದ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತ, ಚೀನಾ ಮತ್ತು ಪಾಕಿಸ್ತಾನ ಸಹ ದೊಡ್ಡ ನಿಯೋಗಗಳೊಂದಿಗೆ ದಾವೋಸ್‌ನ ಸಭೆಗಳಲ್ಲಿ ಭಾಗವಹಿಸಲಿವೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಸಹ ಪಾಲ್ಗೊಳ್ಳಲಿದ್ದಾರೆ.
ಐದು ದಿನಗಳ ವಾರ್ಷಿಕ ಸಭೆಯಲ್ಲಿ ಉಕ್ರೇನ್, ಗಾಜಾ, ವೆನೆಜುವೆಲಾ, ಲ್ಯಾಟಿನ್ ಅಮೆರಿಕ ವಿಷಯಗಳ ಕುರಿತು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ ಎಂದು ಡಬ್ಲ್ಯುಇಎಫ್ ಅಧ್ಯಕ್ಷ ಮತ್ತು ಸಿಇಒ ಬೋರ್ಜ್ ಬ್ರೆಂಡೆ ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1945ರ ಬಳಿಕ ಜಗತ್ತು ಅತ್ಯಂತ ಸಂಕೀರ್ಣ ಭೌಗೋಳಿಕ ರಾಜಕೀಯ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಅನಿಶ್ಚಿತ ಸಮಯದಲ್ಲಿ ಜಗತ್ತಿನ ನಾಯಕರ ನಡುವೆ ಸೌಹಾರ್ದ ರೀತಿಯಲ್ಲಿ ಸಂವಾದ ನಡೆಯಬೇಕಾದ ತುರ್ತು ಇದೆ ಎಂದು ಬ್ರೆಂಡೆ ಪ್ರತಿಪಾದಿಸಿದರು.
ಈ ವರ್ಷ 130ಕ್ಕೂ ಹೆಚ್ಚು ದೇಶಗಳಿಂದ 'ಬ್ಯುಸಿನೆಸ್' ಕ್ಷೇತ್ರದ 1,700ಕ್ಕೂ ಹೆಚ್ಚು ನಾಯಕರು ಪಾಲ್ಗೊಳ್ಳಲಿದ್ದಾರೆ. 30ಕ್ಕೂ ಹೆಚ್ಚು ವಿದೇಶಾಂಗ ಸಚಿವರು, 60ಕ್ಕೂ ಹೆಚ್ಚು ಆರ್ಥಿಕ ಸಚಿವರು, ಕೇಂದ್ರ ಬ್ಯಾಂಕ್‌ಗಳ ಗವರ್ನರ್‌ಗಳು ಭಾಗವಹಿಸಲಿದ್ದಾರೆ ಎಂದರು.
ಭಾರತದ ತಂಡದಲ್ಲಿ 100ಕ್ಕೂ ಹೆಚ್ಚು ಪ್ರತಿನಿಧಿಗಳು
ಭಾರತದಿಂದ ಕನಿಷ್ಠ ನಾಲ್ವರು ಕೇಂದ್ರ ಸಚಿವರು ಆರು ರಾಜ್ಯಗಳ ಮುಖ್ಯಮಂತ್ರಿಗಳು ವಿವಿಧ ಕಂಪನಿಗಳ ಮುಖ್ಯಸ್ಥರು ಸಿಇಒಗಳು ಸೇರಿದಂತೆ 100ಕ್ಕೂ ಹೆಚ್ಚು ಪ್ರತಿನಿಧಿಗಳ ನಿಯೋಗ ಡಬ್ಲುಇಎಫ್ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲಿದೆ. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಶಿವರಾಜ್ ಸಿಂಗ್ ಚೌಹಾಣ್ ಪ್ರಹ್ಲಾದ್ ಜೋಶಿ ಕೆ. ರಾಮಮೋಹನ್ ನಾಯ್ಡು ಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್ (ಮಹಾರಾಷ್ಟ್ರ) ಎನ್.ಚಂದ್ರಬಾಬು ನಾಯ್ಡು (ಆಂಧ್ರ ಪ್ರದೇಶ) ಹಿಮಂತ ಬಿಸ್ವ ಶರ್ಮಾ (ಅಸ್ಸಾಂ) ಮೋಹನ್ ಯಾದವ್ (ಮಧ್ಯ ಪ್ರದೇಶ) ಎ. ರೇವಂತ ರೆಡ್ಡಿ (ತೆಲಂಗಾಣ) ಹೇಮಂತ್ ಸೊರೇನ್ (ಜಾರ್ಖಂಡ್) ಭಾಗವಹಿಸಲಿದ್ದಾರೆ. 'ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಆಗಬಹುದೇ' ಎಂಬ ವಿಷಯ ಸೇರಿದಂತೆ ಹಲವು ಸಂವಾದದಗಳಲ್ಲಿ ಭಾರತದ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.

