ಭಾರತೀಯರು ಸೈಬರ್ ವಂಚನೆಗಳಿಂದಾಗಿ 2024ರಲ್ಲಿ 22,845 ಕೋಟಿ ರೂ.ಕಳೆದುಕೊಂಡಿದ್ದರೆ 2025ರಲ್ಲಿ ಇದು 22,495 ಕೋಟಿ ರೂ.ಗೆ ಇಳಿದಿದೆ, ಆದರೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.
2024ರಲ್ಲಿ ಒಟ್ಟು 22.68 ಲಕ್ಷ ಪ್ರಕರಣಗಳು ವರದಿಯಾಗಿದ್ದರೆ 2025ರಲ್ಲಿ ಈ ಸಂಖ್ಯೆ 28.15 ಲಕ್ಷಕ್ಕೇರಿದೆ. ಈ ಏರಿಕೆಯ ಹೊರತಾಗಿಯೂ ಎಫ್‌ಐಆರ್‌ಗಳ ಸಂಖ್ಯೆ 2024ರಲ್ಲಿದ್ದ 66,370ರಿಂದ 55,484ಕ್ಕೆ ಇಳಿಕೆಯಾಗಿದೆ. ಬ್ಯಾಂಕುಗಳು ಮತ್ತು ಪೋಲಿಸರ ತ್ವರಿತ ಹಸ್ತಕ್ಷೇಪಗಳು ದೂರುಗಳಿಗೆ ಸಂಬಂಧಿಸಿದಂತೆ ವಿಧ್ಯುಕ್ತವಾಗಿ ಎಫ್‌ಐಆರ್‌ಗಳು ದಾಖಲಾಗುವ ಮುನ್ನ ವಂಚನೆಗೊಳಗಾದ ಹಣವನ್ನು ನಿರ್ಬಂಧಿಸಲು ನೆರವಾಗಿವೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಆದಾಗ್ಯೂ ಅಂಕಿಅಂಶಗಳು ಸೈಬರ್ ಅಪರಾಧಗಳಲ್ಲಿ ಏರಿಕೆಯ ಆತಂಕಕಾರಿ ಪ್ರವೃತ್ತಿಯನ್ನು ಸೂಚಿಸುತ್ತಿವೆ. ಹೀಗಿದ್ದರೂ,ಕಾನೂನು ಜಾರಿ ಸಂಸ್ಥೆಗಳು ಸಕಾಲಿಕ ಹಸ್ತಕ್ಷೇಪ,ಖಾತೆಯಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಮತ್ತು ಅಂತರ-ಸಂಸ್ಥೆ ಸಮನ್ವಯದ ಮೂಲಕ ಆರ್ಥಿಕ ಹಾನಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಿವೆ.
ದತ್ತಾಂಶಗಳ ಪ್ರಕಾರ 2025ರಲ್ಲಿ ಜನರು ಕಳೆದುಕೊಂಡಿರುವ ಒಟ್ಟು ಹಣದಲ್ಲಿ ಶೇ.76ರಷ್ಟು ಪಾಲು ಹೂಡಿಕೆ ವಂಚನೆಗಳದ್ದಾಗಿದೆ. ಪೊಂಝಿ ಸ್ಕೀಮ್‌ಗಳು,ನಕಲಿ ಶೇರು ಮಾರುಕಟ್ಟೆ ಟ್ರೇಡಿಂಗ್ ಮತ್ತು ಕ್ರಿಪ್ಟೊಕರೆನ್ಸಿ ವಂಚನೆಗಳು,ಗೇಮಿಂಗ್ ಇತ್ಯಾದಿಗಳು ಇವುಗಳಲ್ಲಿ ಸೇರಿವೆ.
ಹೂಡಿಕೆ ವಂಚನೆಗಳು ಹೆಚ್ಚಲು ಸುಲಭವಾಗಿ ಹಣ ಗಳಿಸುವ ಜನರ ದುರಾಸೆಯೇ ಕಾರಣವಾಗಿದ್ದು,ಇದರಿಂದಾಗಿ ಅವರು ತ್ವರಿತ ಪ್ರತಿಫಲಗಳ ಆಮಿಷಕ್ಕೆ ಬಲಿಯಾಗುತ್ತಾರೆ ಮತ್ತು ಲಕ್ಷಾಂತರ ರೂ.ಗಳನ್ನು ಕಳೆದುಕೊಳ್ಳುತ್ತಾರೆ ಎಂದು ಮೂಲಗಳು ಬೆಟ್ಟು ಮಾಡಿವೆ.
ಡಿಜಿಟಲ್ ಅರೆಸ್ಟ್‌ಗಳು ಒಟ್ಟು ನಷ್ಟದಲ್ಲಿ ಶೇ.9ರಷ್ಟು ಮತ್ತು ಸೆಕ್ಸ್‌ಟಾರ್ಷನ್ (ಖಾಸಗಿ/ಅಶ್ಲೀಲ ಚಿತ್ರ ಅಥವಾ ವೀಡಿಯೊವನ್ನು ಬಹಿರಂಗಗೊಳಿಸುವ ಬೆದರಿಕೆಯೊಡ್ಡಿ ಹಣ ಕೀಳುವುದು) ಶೇ.4ರಷ್ಟು ಪಾಲು ಹೊಂದಿವೆ.
ವರದಿಯಾದ ಒಟ್ಟು ಪ್ರಕರಣಗಳಲ್ಲಿ ಶೇ.35ರಷ್ಟು ಹೂಡಿಕೆ ವಂಚನೆ,ಶೇ.19ರಷ್ಟು ಸೆಕ್ಸ್‌ಟಾರ್ಷನ್ ಮತ್ತು ಶೇ.6ರಷ್ಟು ಡಿಜಿಟಲ್ ಬಂಧನಗಳಿಗೆ ಸಂಬಂಧಿಸಿವೆ.
ಈ ನಡುವೆ ಕೇಂದ್ರ ಸರಕಾರವು ಸೈಬರ್ ಅಪರಾಧಗಳನ್ನು ಎದುರಿಸಲು ಸಾಂಸ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಎಂದು ಹೇಳಿದೆ. ಗೃಹ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು (I4C) ಈಗ ರಾಜ್ಯಗಳು,ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ನಡುವಿನ ಸಮನ್ವಯದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಿದೆ.
ಸೆ.2024ರಲ್ಲಿ ಸ್ಥಾಪನೆಗೊಂಡ I4C ವಂಚನೆ ಪತ್ತೆ ಮತ್ತು ತಡೆಗಟ್ಟುವಿಕೆಗೆ ನೆರವಾಗಲು ಬ್ಯಾಂಕ್‌ಗಳ ಸಹಕಾರದೊಂದಿಗೆ ಶಂಕಿತ ಸೈಬರ್ ಅಪರಾಧಿಗಳ ಗುರುತು ರಿಜಿಸ್ಟ್ರಿಯನ್ನು ಆರಂಭಿಸಿದೆ.
ಇದರೊಂದಿಗೆ 2021ರಲ್ಲಿ ಆರಂಭಗೊಂಡ ನಾಗರಿಕ ಹಣಕಾಸು ಸೈಬರ್ ವಂಚನೆ ವರದಿಗಾರಿಕೆ ಮತ್ತು ನಿರ್ವಹಣೆ ವ್ಯವಸ್ಥೆಯು ತಕ್ಷಣ ವರದಿ ಮಾಡಲು ಅನುಕೂಲ ಕಲ್ಪಿಸುವ ಮೂಲಕ 23.02 ಲಕ್ಷ ದೂರುಗಳಲ್ಲಿ 7,130 ಕೋಟಿ ರೂ.ಗೂ ಅಧಿಕ ಹಣ ವಂಚಕರ ಪಾಲಾಗುವುದನ್ನು ತಪ್ಪಿಸಿದೆ.
ಪ್ರಸ್ತುತ ಭಾರತದಲ್ಲಿ 459 ವಿಶೇಷ ಸೈಬರ್ ಅಪರಾಧ ಪೋಲಿಸ್ ಠಾಣೆಗಳು ಕಾರ್ಯ ನಿರ್ವಹಿಸುತ್ತಿದ್ದು, 2020ರಲ್ಲಿ ಇವುಗಳ ಸಂಖ್ಯೆ 169ರಷ್ಟಿತ್ತು.ಉತ್ತರ ಪ್ರದೇಶವು 75 ಠಾಣೆಗಳೊಂದಿಗೆ ಮುಂಚೂಣಿಯಲ್ಲಿದೆ.

