ದಲಿತರು ಮತ್ತು ಕಪ್ಪುಜನರು "ಶಾಶ್ವತವಾಗಿ ಬಲಿಪಶುವಾಗಿ ಅಥವಾ 'ಸಂತ್ರಸ್ತರು ಎಂಬ ಕಾರ್ಡ್' ಬಳಸುವ ಮೂಲಕ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಧೂಳಿಪುಡಿ ಪಂಡಿತ್ ಹೇಳಿದ್ದಾರೆ.
ಧೂಳಿಪುಡಿ ಪಂಡಿತ್ ಅವರು ಫೆಬ್ರವರಿ 16ರಂದು ಪ್ರಸಾರವಾದ ಪಾಡ್‌ಕಾಸ್ಟ್ ಸಂದರ್ಶನವೊಂದರಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸಲು ಪ್ರಯತ್ನಿಸುವ ಯುಜಿಸಿಯ 2026ರ ಸಮಾನತೆ (ತಾರತಮ್ಯ ವಿರೋಧಿ) ನಿಯಮಗಳ ಕುರಿತು ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ.
"ಯುಜಿಸಿ ನಿಯಮಗಳು ಅನಗತ್ಯ ಮತ್ತು ತಾರ್ಕಿಕವಲ್ಲ. ಶಾಶ್ವತವಾಗಿ ಬಲಿಪಶುವಾಗಿ ಅಥವಾ 'ಸಂತ್ರಸ್ತರೆಂಬ ಕಾರ್ಡ್' ಆಡುತ್ತಾ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಇದನ್ನು ಕಪ್ಪುಜನರಿಗಾಗಿ ಮಾಡಲಾಯಿತು. ಅದನ್ನೇ ಇಲ್ಲಿ ದಲಿತರಿಗೂ ತರಲಾಗಿದೆ. ಯಾರನ್ನಾದರೂ ದೆವ್ವವನ್ನಾಗಿ ಮಾಡುವ ಮೂಲಕ, ಪ್ರಗತಿ ಸಾಧಿಸುವುದು ಸುಲಭವಲ್ಲ. ಇದು ತಾತ್ಕಾಲಿಕ ಮಾದಕವಸ್ತು ಇದ್ದಂತೆ" ಎಂದು ಹೇಳಿದ್ದರು.
ಈ ಕುರಿತು ಸ್ಪಷ್ಟನೆ ನೀಡಿರುವ ಪಂಡಿತ್ ಅವರು, ನಾನು ಕೂಡ ಬಹುಜನ ಸಮುದಾಯದವಳು. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಆ ರೀತಿ ಹೇಳಲಿಲ್ಲ ಎಂದು ಹೇಳಿದ್ದಾರೆ.
ಜೆಎನ್‌ಯು ವಿದ್ಯಾರ್ಥಿ ಸಂಘವು ಪಂಡಿತ್ ಅವರ ಹೇಳಿಕೆಯನ್ನು ಸ್ಪಷ್ಟವಾಗಿ "ಜಾತಿವಾದಿ ಹೇಳಿಕೆ" ಎಂದು ಟೀಕಿಸಿದೆ. ತಮ್ಮ ಹೇಳಿಕೆಗಾಗಿ ಪಂಡಿತ್ ಅವರು ರಾಜೀನಾಮೆಯನ್ನು ನೀಡಬೇಕು. ಅವರ ಹೇಳಿಕೆಗಳು ವಿಶ್ವವಿದ್ಯಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನ್ಯಾಯ, ಜಾತಿ ಪ್ರಾಬಲ್ಯ ಮತ್ತು ವ್ಯವಸ್ಥಿತ ಬಹಿಷ್ಕಾರವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದೆ.

