ಎಐ ಶೃಂಗಸಭೆಯ ವಸ್ತುಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದ್ದ ಭಾರತ ಮಂಡಪಂನ ಹಾಲ್ ಸಂಖ್ಯೆ 6ರಲ್ಲಿ ಖಾಸಗಿ ಶಿಕ್ಷಣಸಂಸ್ಥೆಯಾದ ಗಲ್ಗೋಟಿಯಾಸ್ ವಿಶ್ವವಿದ್ಯಾನಿಲಯಕ್ಕೆ 155 ಚದರ ಮೀಟರ್‌ನ ಬೂತ್ ನೀಡಲಾಗಿತ್ತು. ಇದು ದೇಶದ ನಾಲ್ಕು ಐಐಟಿಗಳು ಹಾಗೂ ಸಂಶೋಧನಾ ಸಂಸ್ಥೆಗೆ ನೀಡಲಾಗಿದ್ದ ಸ್ಥಳವಕಾಶದ ಶೇ.15ಕ್ಕಿಂತಲೂ ಅಧಿಕವೆಂದು ವರದಿಯೊಂದು ಬೆಟ್ಟು ಮಾಡಿ ತೋರಿಸಿದೆ.
ಐಐಟಿ ಬಾಂಬೆ (35 ಚದರ ಮೀಟರ್, ಐಐಟಿ ಮದ್ರಾಸ್ (35 ಚದರ ಮೀಟರ್), ಐಐಟಿ ಗಾಂಧಿನಗರ (18 ಚದರ ಮೀಟರ್) ಹಾಗೂ ಐಐಟಿ ಕಾನ್ಪುರದ ಐರಾವತ ಸಂಶೋಧನಾ ಪ್ರತಿಷ್ಠಾನ (18 ಚದರ ಮೀಟರ್) ಇವುಗಳಿಗೆ ನೀಡಲಾಗಿದ್ದ ಒಟ್ಟು ಸ್ಥಳಾವಕಾಶವು 130 ಚದರ ಮೀಟರ್ ಆಗಿದೆ. ಈ ಐಐಟಿಗಳು, ಕೃತಕಬುದ್ದಿಮತ್ತೆ ಆಧಾರಿತ ಪ್ರವಾಹ ಮುನ್ನೆಚ್ಚರಿಕೆ ವ್ಯವಸ್ಥೆಗಳು, ಭಾಷಣ ಸಿಂಥೆಸಿಸ್ ಹಾಗೂ ತ್ಯಾಜ್ಯ ಬೇರ್ಪಡುವಿಕೆ ವಿಧಾನಗಳು ಇತ್ಯಾದಿಗಳನ್ನು ಪ್ರದರ್ಶಿಸಿದ್ದವು.
ಗಲ್ಗೋಟಿಯಾಸ್ ವಿವಿಯು ತನ್ನ ಮಳಿಗೆಯಲ್ಲಿ ಪ್ರದರ್ಶಿಸಿದ್ದ ರೊಬೊಡಾಗ್ ಚೀನಾ ನಿರ್ಮಿತ 'ನೂನಿಟ್ರೀ ಜಿಓ2 ರೊಬೊಟ್' ಎಂಬುದು ಬೆಳಕಿಗೆ ಬಂದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆನಂತರ ಈ ವಿಶ್ವವಿದ್ಯಾನಿಲಯವನ್ನು ವಸ್ತುಪ್ರದರ್ಶನ ಮಳಿಗೆಯಿಂದ ತೆರವುಗೊಳಿಸಲಾಗಿತ್ತು ಮತ್ತು ಎಐ ಶೃಂಗಸಭೆಯಿಂದ ಹೊರಗಿಡಲಾಗಿತ್ತು.
ರೊಬೊಡಾಗ್ ವಿವಾದದ ಬಳಿಕ ನೇಹಾಸಿಂಗ್ ಅವರು ಸಾಮಾಜಿಕ ಜಾಲತಾಣ ಲಿಂಕ್‌ಡೆನ್‌ನಲ್ಲಿರುವ ತನ್ನ ಪ್ರೊಫೈಲ್‌ನಲ್ಲಿ ಓಪನ್ ಟು ವರ್ಕ್ ಎಂದು ಹ್ಯಾಶ್‌ಟಾಗ್ ಮಾಡಿದ್ದರು. ಸಾಮಾನ್ಯವಾಗಿ ಹೊಸ ಉದ್ಯೋಗ ಅರಸುವವರು ತಮ್ಮ ಪ್ರೊಫೈಲ್ ಟೂಲ್‌ಗಳಲ್ಲಿ ಈ ರೀತಿ ಹ್ಯಾಶ್‌ಟ್ಯಾಗ್ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ನೇಹಾಸಿಂಗ್ ಅವರು ಗೊಲ್ಗೋಟಿಯಾಸ್ ವಿವಿಯನ್ನು ತೊರೆದಿದ್ದಾರೆಯೇ ಎಂಬ ಬಗ್ಗೆ ಸಂದೇಹಗಳು ವ್ಯಕ್ತವಾಗಿದ್ದವು.

