ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ಸಿಲ್ಹೋರಾ ಪಟ್ಟಣದಲ್ಲಿ ಎರಡು ಸಮುದಾಯಗಳಿಗೆ ಸೇರಿದ ಗುಂಪುಗಳ ನಡುವೆ ಶುಕ್ರವಾರ ಘರ್ಷಣೆ ಭುಗಿಲೆದ್ದಿದ್ದು, ಕಲ್ಲೂತೂರಾಟ ಹಾಗೂ ದಾಂಧಲೆ ನಡೆದಿದೆ. ಗಲಭೆ ನಿರತರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ ಹಾಗೂ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ.
ಗಲಭೆಗೆ ಸಂಬಂಧಿಸಿ 49 ಮಂದಿಯನ್ನು ಬಂಧಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಝಾದ್ ಚೌಕ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಗೆ ಗಲಭೆ ಭುಗಿಲೆದ್ದಿದ್ದು, ಆನಂತರ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಯಿತು. ಪ್ರದೇಶದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ನಿರ್ದೇಶನಗಳನ್ನು ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ ತಿಳಿಸಿದ್ದಾರೆ.
ಆಝಾದ್‌ಚೌಕ ಪ್ರದೇಶದಲ್ಲಿ ದೇವಾಲಯ ಹಾಗೂ ಮಸೀದಿ ಆಸುಪಾಸಿನಲ್ಲಿವೆ. ಶುಕ್ರವಾರ ಪೂಜೆಯ ವೇಳೆ ದೇವಾಲಯದ ಸುರಕ್ಷತಾ ಕಂಬಿಗೆ ಹಾನಿಯಾಗಿದೆಯೆಂಬ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದವುಂಟಾಗಿತ್ತು. ಆನಂತರ ಇತ್ತಂಡಗಳೂ ಪರಸ್ಪರ ಕಲ್ಲುತೂರಾಟದಲ್ಲಿ ತೊಡಗಿದವು ಮತ್ತು ಪರಿಸರದಲ್ಲಿದ್ದ ಅಂಗಡಿ ಮತ್ತು ವಾಹನಗಳಿಗೆ ಹಾನಿಯೆಸಗಿದರೆಂದು ಪೊಲೀಸರು ತಿಳಿಸಿದ್ದಾರೆ.
ಪರಿಸ್ಥಿತಿ ಈಗ ನಿಯಂತ್ರಣದಲ್ಲಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ.

